ಹೊಸದಿಲ್ಲಿ | ಸರದಿ ಉಲ್ಲಂಘಿಸಿದ್ದಕ್ಕೆ ಆಕ್ಷೇಪ: ವಿಮಾನ ಪ್ರಯಾಣಿಕನ ಮೇಲೆ ಪೈಲಟ್ ಹಲ್ಲೆ!
ಪ್ರಯಾಣಿಕ ಅಂಕಿತ್ ದೇವನ್ : PC | X
ಹೊಸದಿಲ್ಲಿ: ವಿಮಾನ ಏರುವ (ಬೋರ್ಡಿಂಗ್) ಸರದಿಯನ್ನು ಏರ್ ಇಂಡಿಯಾ ಪೈಲಟ್ ಒಬ್ಬರು ಉಲ್ಲಂಘಿಸಿದ್ದನ್ನು ಆಕ್ಷೇಪಿಸಿದ ಕಾರಣಕ್ಕೆ ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ಸ್ಪೈಸ್ಜೆಟ್ ಪ್ರಯಾಣಿಕರೊಬ್ಬರು ಆಪಾದಿಸಿದ್ದಾರೆ.
ಅಂಕಿತ್ ದೇವನ್ ಎಂಬ ಪ್ರಯಾಣಿಕ ಈ ವಿಷಯವನ್ನು ಎಕ್ಸ್ ಪೋಸ್ಟ್ ನಲ್ಲಿ ಬಹಿರಂಗಪಡಿಸಿದ್ದು, ರಕ್ತಸಿಕ್ತ ಮುಖದ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ತಮ್ಮ ಏಳು ವರ್ಷದ ಪುತ್ರಿ ಈ ಘಟನೆಗೆ ಸಾಕ್ಷಿಯಾಗಿದ್ದು, ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದಾಗಿ ವಿವರಿಸಿದ್ದಾರೆ. ದೆಹಲಿ ವಿಮಾನ ನಿಲ್ದಾಣದ 1ನೇ ಟರ್ಮಿನಲ್ನಲ್ಲಿ ಈ ಘಟನೆ ನಡೆದಿದೆ.
ಪುಟ್ಟ ಮಗು ಇದ್ದ ಕಾರಣಕ್ಕೆ ನಾಲ್ಕು ತಿಂಗಳ ಪುತ್ರಿ ಸೇರಿದಂತೆ ತಮ್ಮ ಕುಟುಂಬ ಸದಸ್ಯರನ್ನು ಸಿಬ್ಬಂದಿಗಾಗಿ ಇರುವ ಸೆಕ್ಯುರಿಟಿ ಚೆಕ್ಇನ್ ಸರದಿ ಸೇರಿಕೊಳ್ಳುವಂತೆ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಪೈಲಟ್ ಸರದಿ ಉಲ್ಲಂಘಿಸಿ ನನ್ನ ಮುಂದೆ ನಿಂತರು. ಕ್ಯಾಪ್ಟನ್ ವೀರೇಂದ್ರ ಎಂಬುವವರು ಕೂಡಾ ಇದನ್ನೇ ಅನುಸರಿಸಿದರು. ನೀನು ಅನಕ್ಷರಸ್ಥನೇ, ಸಿಬ್ಬಂದಿಯ ಪ್ರವೇಶಕ್ಕೆ ಮೀಸಲು ಎನ್ನುವ ಸಂಕೇತ ಕಾಣುವುದಿಲ್ಲವೇ ಎಂದು ನಿಂದಿಸಿದ್ದಾಗಿ ದೇವನ್ ವಿವರಿಸಿದ್ದಾರೆ.
ವಾಗ್ವಾದ ನಡೆದ ಸಂದರ್ಭದಲ್ಲಿ ಏರ್ ಇಂಡಿಯಾ ಪೈಲಟ್ ದೈಹಿಕವಾಗಿ ಹಲ್ಲೆ ನಡೆಸಿ ಗಾಯಗೊಳಿಸಿದ. ಆತನ ಅಂಗಿಯ ಮೇಲೆ ಇದ್ದ ರಕ್ತ ಕೂಡಾ ನನ್ನ ರಕ್ತ ಎಂದು ದೇನ್ ಹೇಳಿದ್ದಾರೆ. ಇಂಥ ವರ್ತನೆಯನ್ನು ಒಕ್ಕೊರಲಿನಿಂದ ಖಂಡಿಸುವುದಾಗಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ಹೇಳಿಕೆ ನೀಡಿದೆ.