ಹಿಜಾಬ್ ಎಳೆದ ಪ್ರಕರಣ | ಪಿಡಿಪಿ ನಾಯಕಿ ಇಲ್ತಿಜಾ ಮುಫ್ತಿಯಿಂದ ಸಿಎಂ ನಿತೀಶ್ ಕುಮಾರ್ ವಿರುದ್ಧ ದೂರು ದಾಖಲು
ಇಲ್ತಿಜಾ ಮುಫ್ತಿ | Photo Credit : X/IltijaMufti_
ಶ್ರೀನಗರ, ಡಿ. 19: ಇತ್ತೀಚೆಗೆ ನಡೆದ ಸರಕಾರಿ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ವೈದ್ಯರೊಬ್ಬರ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಪುತ್ರಿ ಹಾಗೂ ಪಿಡಿಪಿ ನಾಯಕಿ ಇಲ್ತಿಜಾ ಮುಫ್ತಿ ಶ್ರೀನಗರದ ಕೋಠಿಬಾಗ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದಾರೆ.
ಕೋಟಿಭಾಗ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗೆ ಸಲ್ಲಿಸಿದ ದೂರಿನಲ್ಲಿ ಇಲ್ತಿಜಾ, ‘‘ಮುಸ್ಲಿಮರಿಗೆ, ವಿಶೇಷವಾಗಿ ಮುಸ್ಲಿಂ ಮಹಿಳೆಯರಿಗೆ ಅಪಾರ ದುಃಖ ಹಾಗೂ ನೋವುಂಟು ಮಾಡಿರುವ ಒಂದು ಕೆಟ್ಟ ಘಟನೆಯ ಬಗ್ಗೆ ತಿಳಿಸಲು ನಾನು ಬಯಸುತ್ತಿದ್ದೇನೆ’’ ಎಂದು ಹೇಳಿದ್ದಾರೆ.
‘‘ಕೆಲವು ದಿನಗಳ ಹಿಂದೆ ಸರಕಾರಿ ಕಾರ್ಯಕ್ರಮವೊಂದರಲ್ಲಿ ಎಲ್ಲರೂ ನೋಡುತ್ತಿದ್ದಂತೆ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಯುವ ಮುಸ್ಲಿಂ ವೈದ್ಯೆ ನುಸ್ರತ್ ಪರ್ವೀನ್ ಅವರ ಹಿಜಾಬ್ ಎಳೆದಾಗ ನಾವು ಅದನ್ನು ಆಘಾತ, ಭಯ, ಚಿಂತೆಯಿಂದ ನೋಡಿದ್ದೇವೆ ಎಂದು ಅವರು ಹೇಳಿದ್ದಾರೆ.
ಆಕೆಯ ಹಿಜಾಬ್ ಅನ್ನು ಬಲವಂತವಾಗಿ ತೆಗೆಯುವುದು ಕೇವಲ ಮುಸ್ಲಿಂ ಮಹಿಳೆಯರ ಮೇಲಿನ ಕ್ರೂರ ಹಲ್ಲೆಯಲ್ಲ. ಬದಲಾಗಿ ಪ್ರತಿಯೊಬ್ಬ ಭಾರತೀಯ ಮಹಿಳೆಯ ಸ್ವಾಯತ್ತೆ, ಅನನ್ಯತೆ ಹಾಗೂ ಘನತೆಯ ಮೇಲಿನ ದೌರ್ಜನ್ಯವಾಗಿದೆ’’ ಎಂದು ಅವರು ತಿಳಿಸಿದ್ದಾರೆ.
ಈ ನಾಚಿಕೆಗೇಡಿನ ಘಟನೆಯ ನಂತರ ದೇಶಾದ್ಯಂತ ಮುಸ್ಲಿಂ ಮಹಿಳೆಯರ ಹಿಜಾಬ್ ಅನ್ನು ದುಷ್ಕರ್ಮಿಗಳು ಎಳೆಯುತ್ತಿರುವ ಹಲವು ವೀಡಿಯೊಗಳನ್ನು ನಾವು ನೋಡಿದ್ದೇವೆ. ಒಬ್ಬ ಮುಖ್ಯಮಂತ್ರಿ ಅಸಭ್ಯ ಕೃತ್ಯ ಎಸಗಿದ್ದಾರೆ. ಇದು ಸಮಾಜ ವಿರೋಧಿ ಶಕ್ತಿಗಳನ್ನು ಪ್ರೋತ್ಸಾಹಿಸಿರಬಹುದು. ಮುಖ್ಯಮಂತ್ರಿ ಅವರ ಈ ಕೃತ್ಯ ಎಸಗುವ ಮೂಲಕ ಮುಸ್ಲಿಂ ಮಹಿಳೆಯರನ್ನು ಅವಮಾನಿಸಲು ಹಾಗೂ ಆಕ್ರಮಣ ಮಾಡಲು ಪ್ರೇರಣೆ ನೀಡಿದ್ದಾರೆ ಎಂದು ಇಲ್ತಿಜಾ ಹೇಳಿದ್ದಾರೆ.
ಇದಕ್ಕಿಂತ ಮುನ್ನ ಇಲ್ತಿಜಾ ನೇತತ್ವದಲ್ಲಿ ಪಿಡಿಪಿಯ ಮಹಿಳಾ ಕಾರ್ಯಕರ್ತರು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ಪಕ್ಷದ ಕೇಂದ್ರ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು.