Bihar | ವೋಟ್ ಚೋರಿ ವಿವಾದವನ್ನು ಮತ್ತೆ ಕೆದಕಿದ ಜಿತನ್ ರಾಮ್ ಮಾಂಝಿ ವೀಡಿಯೊ
ಜಿತನ್ ರಾಮ ಮಾಂಝಿ | Photo Credit : PTI
ಪಾಟ್ನಾ,ಡಿ.19: ಕೇಂದ್ರ ಸಚಿವ ಹಾಗೂ ಎಚ್‌ಎಎಂ ಮುಖ್ಯಸ್ಥ ಜಿತನ್ ರಾಮ್ ಮಾಂಝಿಯವರು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹಸ್ತಕ್ಷೇಪದ ಕುರಿತು ಮಾತನಾಡಿದ್ದನ್ನು ತೋರಿಸಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಬಳಿಕ ಬಿಹಾರದಲ್ಲಿ ಹೊಸ ರಾಜಕೀಯ ಬಿರುಗಾಳಿಯೆದ್ದಿದ್ದು, ಪ್ರತಿಪಕ್ಷಗಳು ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ‘ವೋಟ್ ಚೋರಿ’ ಆರೋಪಗಳನ್ನು ಪುನರುಚ್ಚರಿಸಿದ್ದಾರೆ.
ಗಯಾ ಲೋಕಸಭಾ ಕ್ಷೇತ್ರದಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾಗಿರುವ ವೀಡಿಯೊವನ್ನು ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಕೂಟವು ಚುನಾವಣಾ ಅಕ್ರಮಕ್ಕೆ ಸಾಕ್ಷಿಯಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದೆ. ಆದರೆ ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಮಾಂಝಿ, ವೀಡಿಯೊವನ್ನು ತಿರುಚಲಾಗಿದೆ ಮತ್ತು ತಪ್ಪಾಗಿ ನಿರೂಪಿಸಲಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಟಿಕಾರಿ ವಿಧಾನಸಭಾ ಕ್ಷೇತ್ರದ ಕುರಿತು ಮಾಂಝಿ ಆಡಿದ್ದರೆನ್ನಲಾಗಿರುವ ಮಾತು ವಿವಾದದ ಕೇಂದ್ರಬಿಂದುವಾಗಿದೆ.
ವೀಡಿಯೊದಲ್ಲಿ ಮಾಂಝಿ 2020ರ ವಿಧಾನಸಭಾ ಚುನಾವಣೆಯನ್ನು ಪ್ರಸ್ತಾಪಿಸಿದ್ದಾರೆ. ಆ ಚುನಾವಣೆಯಲ್ಲಿ ಅವರ ಪಕ್ಷದ ಅಭ್ಯರ್ಥಿ ಅನಿಲ್ ಕುಮಾರ್ ಅಲ್ಪ ಅಂತರದಿಂದ ಗೆದ್ದಿದ್ದರು. ಆದರೆ ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಆರ್‌ಜೆಡಿ ಅಭ್ಯರ್ಥಿಯೆದುರು ಸೋಲನ್ನಪ್ಪಿದ್ದಾರೆ.
ಮಘಾಹಿಯಲ್ಲಿ ಮಾತನಾಡಿದ ಮಾಂಝಿ,‘2020ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ 2,700 ಮತಗಳಿಂದ ಹಿಂದುಳಿದಿದ್ದರು. ಅವರು ನನಗೆ ಕರೆ ಮಾಡಿದ್ದರು ಮತ್ತು ನಾನು ಸಂಬಂಧಿಸಿದ ಅಧಿಕಾರಿಯೊಂದಿಗೆ ಮಾತನಾಡಿದ್ದೆ. ಅಂತಿಮವಾಗಿ ನಮ್ಮ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಲಾಗಿತ್ತು’ ಎಂದು ಹೇಳಿರುವುದು ವೀಡಿಯೊದಲ್ಲಿ ಕೇಳಿಬಂದಿದೆ.
ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸುದ್ದಿಸಂಸ್ಥೆಗೆ ಸಾಧ್ಯವಾಗಿಲ್ಲ.
ಅದೇ ವೀಡಿಯೊ ತುಣುಕಿನಲ್ಲಿ ಮಾಂಝಿ 2020ರ ಫಲಿತಾಂಶವನ್ನು ಇತ್ತೀಚಿನ ಸೋಲಿನೊಂದಿಗೆ ಹೋಲಿಸಿದ್ದಾರೆ.‘ಈ ಸಲ ನಮ್ಮ ಅಭ್ಯರ್ಥಿ 1,600 ಮತಗಳ ಅಂತರದಿಂದ ಸೋತಿದ್ದಾರೆ. ಆದರೆ ನನ್ನನ್ನು ಸಂಪರ್ಕಿಸುವ ಬದಲು ಸೋಲನ್ನು ಒಪ್ಪಿಕೊಳ್ಳಲು ಅವರು ನಿರ್ಧರಿಸಿದರು. ಈಗ ತ್ರಿಪುರಾದಲ್ಲಿ ನಿಯೋಜಿತರಾಗಿರುವ ಗಯಾದ ಆಗಿನ ಜಿಲ್ಲಾಧಿಕಾರಿ ನನಗೆ ದೂರವಾಣಿ ಕರೆ ಮಾಡಿ ಈ ಸಲ ಎಲ್ಲಿ ತಪ್ಪಾಗಿತ್ತು ಎಂದು ವಿಚಾರಿಸಿದ್ದರು. ಅಭ್ಯರ್ಥಿ ನನ್ನನ್ನು ಸಂಪರ್ಕಿಸದೆ ಮನೆಗೆ ಮರಳಲು ನಿರ್ಧರಿಸಿದಾಗ ಏನಾದರೂ ಮಾಡಲು ನನಗೆ ಸಾಧ್ಯವಾಗಿರಲಿಲ್ಲ’ಎಂದು ಮಾಂಝಿ ಹೇಳಿರುವುದು ವೀಡಿಯೊದಲ್ಲಿ ಕೇಳಿ ಬಂದಿದೆ.
ಆರ್‌ಜೆಡಿ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್ ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದು,ಇದು ಪ್ರಧಾನಿ ನರೇಂದ್ರ ಮೋದಿಯವರ ಕೃತಕ ಜನಪ್ರಿಯತೆಯ ಹಿಂದಿನ ಸತ್ಯವಾಗಿದೆ ಎಂದು ಬಣ್ಣಿಸಿದೆ. ‘ಇತ್ತೀಚಿನ ಚುನಾವಣೆಯಲ್ಲಿ ಮೋದಿಯವರು ಚುನಾವಣಾ ಆಯೋಗದ ಬೆಂಬಲದೊಂದಿಗೆ ನಮ್ಮ ಯುವ ಮತ್ತು ಕ್ರಾಂತಿಕಾರಿ ನಾಯಕ ತೇಜಸ್ವಿ ಯಾದವ ಅವರ ‘ರಾಜಕೀಯ ಹತ್ಯೆ’ಗೆ ವಿಫಲ ಯತ್ನವನ್ನು ನಡೆಸಿದ್ದರು’ ಎಂದು ಅದು ಆರೋಪಿಸಿದೆ.
ಇತ್ತೀಚಿಗೆ ಸಂಸತ್ತಿನಲ್ಲಿ ಮತಗಳ್ಳತನ ಆರೋಪಕ್ಕೆ ಪ್ರತಿಕ್ರಿಯಿಸುವಾಗ ಕೇಂದ್ರ ಗೃಹ ಸಚಿವರು ಬೆಂಕಿಯುಂಡೆಯಾಗಿದ್ದರು. ಈಗ ಅವರ ಸಂಪುಟ ಸಹೋದ್ಯೋಗಿಯ ಹೇಳಿಕೆಯು ನಡೆಯುತ್ತಿರುವುದು ಮತಗಳ್ಳತನವಲ್ಲ,ಮತಗಳ ದರೋಡೆ ಎನ್ನುವುದನ್ನು ಸೂಚಿಸುತ್ತಿದೆ ಎಂದು ಬಿಹಾರ ಕಾಂಗ್ರೆಸ್ ವಕ್ತಾರ ಅಸಿತ್ ನಾಥ್ ತಿವಾರಿ ಆರೋಪಿಸಿದರು.
ಬಿಜೆಪಿ ವಿವಾದವನ್ನು ಲಘುವಾಗಿ ಪರಿಗಣಿಸಲು ಯತ್ನಿಸಿದೆ.
‘ಎಡಿಟ್ ಮಾಡಿರದ ವೀಡಿಯೊವನ್ನು ನಾನು ನೋಡಿದ್ದೇನೆ. 2020ರಲ್ಲಿ ತನ್ನ ಪಕ್ಷದ ಅಭ್ಯರ್ಥಿ ಅಂತಿಮ ಸುತ್ತಿನಲ್ಲಿ ಸ್ವಲ್ಪ ಮತಗಳ ಅಂತರದಿಂದ ಹಿಂದುಳಿದಿದ್ದಾಗ ಹಲವಾರು ಗಂಟೆಗಳ ಕಾಲ ಮತದಾನವನ್ನು ಸ್ಥಗಿತಗೊಳಿಸಿದ್ದ ಬಗ್ಗೆ ಮಾಂಝಿ ಮಾತನಾಡಿದ್ದರು. ಮತ ಎಣಿಕೆ ಮುಗಿದ ಬಳಿಕ ಅವರ ಅಭ್ಯರ್ಥಿ ಗೆದ್ದಿದ್ದರು ’ಎಂದು ಬಿಹಾರದ ಸಚಿವ ಹಾಗೂ ರಾಜ್ಯ ಬಿಜೆಪಿಯ ಮಾಜಿ ಅಧ್ಯಕ್ಷ ದಿಲೀಪ ಜೈಸ್ವಾಲ್ ಹೇಳಿದರು