ರೆಸ್ಟೊರೆಂಟ್‌ನಲ್ಲಿ ಬಿರಿಯಾನಿ ಜೊತೆ ಹೆಚ್ಚುವರಿ ರಾಯಿತಾ ಕೇಳಿದ್ದಕ್ಕೆ ಹೊಡೆದಾಟ, ಗ್ರಾಹಕ ಮೃತ್ಯು; ಐವರ ಬಂಧನ
ಮುಹಮ್ಮದ್ ಲಿಯಾಕತ್ | Photo : thenewsminute.com
ಹೈದರಾಬಾದ್ : ಹೈದರಾಬಾದ್‌ನಲ್ಲಿರುವ ಜನಪ್ರಿಯ ಬಿರಿಯಾನಿ ಹೊಟೇಲೊಂದರಲ್ಲಿ ರವಿವಾರ ಮಧ್ಯರಾತ್ರಿ 32 ವರ್ಷದ ವ್ಯಕ್ತಿಯೊಬ್ಬರು ಸಾವಿಗೀಡಾದ ಘಟನೆಗೆ ಸಂಬಂಧಿಸಿ ಹೊಟೇಲ್‌ನ ಐವರು ಸಿಬ್ಬಂದಿಯನ್ನು ಬಂಧಿಸಲಾಗಿದೆ ಹಾಗೂ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತಿನಲ್ಲಿಡಲಾಗಿದೆ.
ಚಂದ್ರಯಂಗುಟ್ಟ ಪ್ರದೇಶದ ಉದ್ಯಮಿ ಮುಹಮ್ಮದ್ ಲಿಯಾಕತ್ ಮತ್ತು ಅವರ ಸ್ನೇಹಿತರು ಹಾಗೂ ರೆಸ್ಟೋರೆಂಟ್ ಸಿಬ್ಬಂದಿಯ ನಡುವೆ ರವಿವಾರ ತಡರಾತ್ರಿ ಜಗಳ ಸಂಭವಿಸಿತು. ಆಗ ಸ್ಥಳೀಯ ಪೊಲೀಸರು ಎಲ್ಲರನ್ನೂ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು.
ಪೊಲೀಸ್ ಠಾಣೆಯಲ್ಲಿ ಲಿಯಾಕತ್ ಕುಸಿದು ಬಿದ್ದರು. ಅವರನ್ನು ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಲಾಯಿತಾದರೂ ಆಸ್ಪತ್ರೆ ತಲುಪುವ ವೇಳೆಗೆ ಅವರು ಕೊನೆಯುಸಿರೆಳೆದಿದ್ದರು. ಘಟನೆಗೆ ಸಂಬಂಧಿಸಿ ಹೈದರಾಬಾದ್ ಪೊಲೀಸ್ ಕಮಿಶನರ್ ಸಿ.ವಿ .ಆನಂದ್ ಪಂಜಗುಟ್ಟ ಸಬ್ ಇನ್ಸ್‌ಪೆಕ್ಟರ್ ಶಿವ ಶಂಕರ್ ಮತ್ತು ಕಾನ್ಸ್‌ಟೇಬಲ್ ಶಂಕರ್‌ರನ್ನು ಕರ್ತವ್ಯಲೋಪಕ್ಕಾಗಿ ಅಮಾನತುಗೊಳಿಸಿದ್ದಾರೆ.
ಲಿಯಾಕತ್ ತನ್ನ ಒಂಭತ್ತು ಸ್ನೇಹಿತರೊಂದಿಗೆ ರೆಸ್ಟೋರೆಂಟ್‌ಗೆ ಹೋಗಿ ಮಟನ್ ಬಿರಿಯಾನಿ ಕೇಳಿದ್ದರು. ಹೆಚ್ಚುವರಿ ‘ರಾಯಿತ’ ಕೇಳಿದಾಗ ವೇಟರ್ ಇಲ್ಲ ಎಂದು ಹೇಳಿದ್ದರೆನ್ನಲಾಗಿದೆ. ಆಗ ಸಹನೆ ಕಳೆದುಕೊಂಡ ಲಿಯಾಕತ್ ಮತ್ತು ಸ್ನೇಹಿತರು ಹಾಗೂ ರೆಸ್ಟೋರೆಂಟ್ ಸಿಬ್ಬಂದಿ ನಡುವೆ ಹೊಡೆದಾಟ ನಡೆಯಿತು. ಪೊಲೀಸ್ ಠಾಣೆಯಲ್ಲಿ ಘಟನೆಯನ್ನು ಪೊಲೀಸರಿಗೆ ವಿವರಿಸುತ್ತಿದ್ದಾಗ ಲಿಯಾಕತ್ ಕುಸಿದುಬಿದ್ದರು.