ನಾನು ಹಿಂದೂ ಮಹಿಳೆಯ ಮುಖಪರದೆ ಎಳೆದಿದ್ದರೆ ಬಿಜೆಪಿ ಪ್ರತಿಕ್ರಿಯೆ ಹೇಗಿರುತ್ತಿತ್ತು? : ಕಾಶ್ಮೀರ ಸಿಎಂ
photo: indianexpress
ಹೊಸದಿಲ್ಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಾರ್ವಜನಿಕ ಸಮಾರಂಭದಲ್ಲಿ ಮುಸ್ಲಿಂ ವೈದ್ಯೆಯ ಹಿಜಾಬ್ ಎಳೆದ ಘಟನೆಗೆ ಸಂಬಂಧಿಸಿದ ವಿವಾದ ಮತ್ತಷ್ಟು ಜಟಿಲವಾಗುತ್ತಿದೆ. ಬಿಜೆಪಿ ಘಟನೆಯನ್ನು ಸಮರ್ಥಿಸಿಕೊಳ್ಳಲು ಸಾಹಸ ಮಾಡುತ್ತಿದ್ದರೆ ಇನ್ನೊಂದೆಡೆ ಸಿಎಂ ಬಹಿರಂಗ ಕ್ಷಮೆಯಾಚಿಸಬೇಕು ಎಂಬ ಆಗ್ರಹ ವ್ಯಾಪಕವಾಗಿ ಕೇಳಿಬರುತ್ತಿದೆ."ಮಹಿಳೆ ಉದ್ಯೋಗಪತ್ರ ಸ್ವೀಕರಿಸಲಿ ಅಥವಾ ನರಕಕ್ಕೆ ಹೋಗಲಿ" ಎಂದು ಹೇಳುವ ಮೂಲಕ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿವಾದ ಉಲ್ಬಣಗೊಳಿಸಿದ್ದಾರೆ.
ಏತನ್ಮಧ್ಯೆ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, "ರಾಜಸ್ಥಾನ ಅಥವಾ ಹರ್ಯಾಣದಲ್ಲಿ ನಾನು ಹಿಂದೂ ಮಹಿಳೆಯ ಮುಖಪರದೆ ಎಳೆದಿದ್ದರೆ ಬಿಜೆಪಿಯ ಪ್ರತಿಕ್ರಿಯೆ ಹೀಗೆಯೇ ಇರುತ್ತಿತ್ತೇ?" ಎಂದು ಮಾತಿನ ಚಾಟಿ ಬೀಸಿದ್ದಾರೆ.
"ಒಬ್ಬ ಮುಸ್ಲಿಂ ವ್ಯಕ್ತಿ ಹಿಂದೂ ಮಹಿಳೆಯ ಮುಖಪರದೆ ಸರಿಸಿದ್ದರೆ ಎಂಥ ಇಕ್ಕಟ್ಟಿನ ಸ್ಥಿತಿ ನಿರ್ಮಾಣವಾಗುತ್ತಿತ್ತು ಎನ್ನುವುದನ್ನು ಕಲ್ಪಿಸಿಕೊಳ್ಳಿ. ಆದರೆ ಮುಸ್ಲಿಂ ಮಹಿಳೆ ಎಂಬ ಕಾರಣಕ್ಕೆ ಬಿಜೆಪಿ ಈ ಬಗೆಯಲ್ಲಿ ವರ್ತಿಸುತ್ತಿದೆ. ಇದಕ್ಕಿಂತ ಹೆಚ್ಚಿನದನ್ನು ಬಿಜೆಪಿಯಿಂದ ನಿರೀಕ್ಷಿಸಲು ಸಾಧ್ಯವಿಲ್ಲ" ಎಂದು ಚುಚ್ಚಿದ್ದಾರೆ.
ಬಿಜೆಪಿ ಸಚಿವ ಗಿರಿರಾಜ್ ಸಿಂಗ್, ನಿಶದ್ ಪಾರ್ಟಿ ಮುಖಂಡ ಮತ್ತು ಉತ್ತರ ಪ್ರದೇಶ ಸಚಿವ ಸಂಜಯ್ ನಿಶದ್, ನಿತೀಶ್ ಕ್ರಮವನ್ನು ಸಮರ್ಥಿಸಿಕೊಳ್ಳುವ ಮೂಲಕ ವ್ಯಾಪಕ ಆಕ್ರೋಶ ಎದುರಿಸುತ್ತಿದ್ದಾರೆ. ನಿಶದ್ ಅವರಂತೂ, 'ಹಿಜಾಬ್ ಎಳೆದಿದ್ದಕ್ಕೆ ಇಷ್ಟು ವಿವಾದ ಸೃಷ್ಟಿಯಾದರೆ, ಬೇರೆ ಕಡೆ ಸ್ಪರ್ಶಿಸಿದ್ದರೆ ಏನಾಗುತ್ತಿತ್ತು" ಎಂದು ಹೇಳಿಕೆ ನೀಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದರು.