×
Ad

ರೋಟಿ - ಕಪ್ಡಾ - ಮಕಾನ್ ಕಾಲ ಹೊಯ್ತು, ಈಗೇನಿದ್ದರೂ ಮೊಬೈಲ್ -ವಾಹನ ಬೇಕು!

ಭಾರತದ ಗ್ರಾಮೀಣ ಜನತೆ ಏನನ್ನು ಹೆಚ್ಚು ಖರೀದಿಸುತ್ತಿದ್ದಾರೆ ಗೊತ್ತಾ?

Update: 2025-12-18 20:39 IST

ಸಾಂದರ್ಭಿಕ ಚಿತ್ರ | Photo Credit : freepik

ಹಣದುಬ್ಬರದ ಜೊತೆಗೆ ಹೊಂದಿಸಿ ನೋಡಿದರೆ, ದಶಕಗಳ ಹಿಂದೆಗೆ ಹೋಲಿಸಿದರೆ ಸಾಮಾನ್ಯ ಗ್ರಾಮೀಣ ಕುಟುಂಬವೊಂದು ಇದೀಗ ಉಪಭೋಗಿ ವಸ್ತುಗಳ ಮೇಲೆ ಸುಮಾರು ವಾರ್ಷಿಕ 13,000 ರೂಪಾಯಿಯಷ್ಟು ಹೆಚ್ಚು ವೆಚ್ಚ ಮಾಡುತ್ತಿದೆ!

ಭಾರತೀಯ ಗ್ರಾಹಕರ ಉಪಭೋಗಿ ಸಂಸ್ಕೃತಿಯನ್ನು ಗಮನಿಸಿದರೆ ಆಹಾರದ ಖರೀದಿ ಕಡಿಮೆಯಾಗಿದೆ. ಬದಲಾಗಿ ಬಳಕೆಯೋಗ್ಯ ಇತರ ವಸ್ತುಗಳ ಖರೀದಿಯಲ್ಲಿ ಹೆಚ್ಚಳವಾಗಿದೆ. ರೋಟಿ, ಕಪ್‌ಡಾ, ಮಕಾನ್ ಎನ್ನುವುದು ಗ್ರಾಹಕರ ಉಪಭೋಗಿ ಸಂಸ್ಕೃತಿಯಲ್ಲಿ ಮುಖ್ಯವಾದ ವಸ್ತುಗಳಲ್ಲ. ಬಟ್ಟೆ ಮತ್ತು ಚಪ್ಪಲಿಗಿಂತ ಹೆಚ್ಚು ವೆಚ್ಚವನ್ನು ಭಾರತೀಯರು ಮೊಬೈಲ್ ಫೋನ್‌, ವಾಹನಗಳಂತಹ ವಸ್ತುಗಳ ಮೇಲೆ ಮಾಡಿದ್ದಾರೆ.

2025ರ ಕೌಟುಂಬಿಕ ಉಪಭೋಗ ವೆಚ್ಚ ಸಮೀಕ್ಷೆಯಲ್ಲಿ ಕಂಡು ಬಂದಿರುವ ಪ್ರಕಾರ, ಗ್ರಾಮೀಣ ವೆಚ್ಚ ಶೇ 217ರಷ್ಟು ಏರಿಕೆಯಾಗಿದೆ. ಬಟ್ಟೆ ಮತ್ತು ಚಪ್ಪಲಿಗಳ ಖರೀದಿ ಕಡಿಮೆಯಾಗಿದೆ. ಉಪಭೋಗ ವೆಚ್ಚ ಸಮೀಕ್ಷೆಯಲ್ಲಿ ಸುಮಾರು 2.5 ಲಕ್ಷ ಕುಟುಂಬಗಳು ಭಾಗವಹಿಸಿದ್ದರು. ಅವರಲ್ಲಿ ಸುಮಾರು ಶೇ 60ರಷ್ಟು ಗ್ರಾಮೀಣ ಪ್ರದೇಶದವರು. ಸಮೀಕ್ಷೆಯಲ್ಲಿ ಆಹಾರ ವಸ್ತುಗಳು, ಧಾನ್ಯಗಳು, ಹಾಲು, ಇಂಧನ ಮತ್ತು ವೈದ್ಯಕೀಯ ವೆಚ್ಚಗಳು ಮತ್ತು ವ್ಯಾಪಕ ಪ್ರಮಾಣದ ಬಳಕೆಯೋಗ್ಯ ವಸ್ತುಗಳ ವಿವರವಿತ್ತು. ಒಟ್ಟಾಗಿ ನೋಡಿದರೆ ಭಾರತೀಯ ಮನೆಗಳು ಏರುತ್ತಿರುವ ವೆಚ್ಚದ ನಡುವೆ ಯಾವುದಕ್ಕೆ ಆದ್ಯತೆ ನೀಡುತ್ತಿದ್ದಾರೆ ಮತ್ತು ನೀಡುವುದಿಲ್ಲ ಹಾಗೂ ಬದಲಾಗುತ್ತಿರುವ ಆರ್ಥಿಕ ಸ್ಥಿತಿಗಳ ಬಗ್ಗೆ ಈ ದತ್ತಾಂಶ ವಿವರ ನೀಡುತ್ತದೆ.

ಉಪಭೋಗಿ ವಸ್ತುಗಳ ಮೇಲೆ ಏರಿದ ವೆಚ್ಚ

ಸಮೀಕ್ಷೆಯಲ್ಲಿ ಕಂಡುಬಂದಿರುವ ಅತಿದೊಡ್ಡ ವಿಚಾರವೆಂದರೆ ಖರೀದಿಯಲ್ಲಿ ಆಹಾರದ ಪ್ರಮಾಣದಲ್ಲಿ ಕುಸಿತವಾಗಿರುವುದು. ಉಪಭೋಗಿ ವಸ್ತುಗಳ ಮೇಲೆ ವೆಚ್ಚ ಹೆಚ್ಚಾಗಿರುವುದು.

ಗ್ರಾಮೀಣ ಭಾಗದಲ್ಲಿ ಉಪಭೋಗಿ ವಸ್ತುಗಳ ಮೇಲೆ ವೆಚ್ಚ ಮಾಡುವ ಪ್ರಮಾಣ ಶೇ 217ರಷ್ಟು ಹೆಚ್ಚಾಗಿದೆ. ತಲಾ ವ್ಯಕ್ತಿಗೆ ಮಾಸಿಕವಾಗಿ 170 ರೂಪಾಯಿ 540 ರೂಪಾಯಿಗೆ ಏರಿಕೆಯಾಗಿದೆ. ಅನೇಕ ರಾಜ್ಯಗಳಲ್ಲಿ ಉಪಭೋಗಿ ವಸ್ತುಗಳನ್ನು ಖರೀದಿಸುವುದು ಮಾಸಿಕವಾಗಿ ತಲಾ ವ್ಯಕ್ತಿಗೆ ಶೇ 500ಕ್ಕಿಂತ ಮೇಲೆ ಹೋಗಿದೆ. ಹಣದುಬ್ಬರದ ಜೊತೆಗೆ ಹೊಂದಿಸಿ ನೋಡಿದರೆ, ದಶಕಗಳ ಹಿಂದೆಗೆ ಹೋಲಿಸಿದರೆ ಸಾಮಾನ್ಯ ಗ್ರಾಮೀಣ ಕುಟುಂಬವೊಂದು ಇದೀಗ ಉಪಭೋಗಿ ವಸ್ತುಗಳ ಮೇಲೆ ಸುಮಾರು ವಾರ್ಷಿಕ 13,000 ರೂಪಾಯಿಯಷ್ಟು ಹೆಚ್ಚು ವೆಚ್ಚ ಮಾಡುತ್ತಿದೆ.

ಇದೀಗ ಗ್ರಾಹಕರಲ್ಲಿ ಬಂದಿರುವ ಬದಲಾವಣೆ ಹೆಚ್ಚು ಖರೀದಿ ಮಾತ್ರವಲ್ಲ, ಗ್ರಾಹಕ ವಸ್ತುಗಳನ್ನು ಗಮನಿಸಿದಲ್ಲಿ ಬಟ್ಟೆ ಮತ್ತು ಚಪ್ಪಲಿಗಳನ್ನು ಖರೀದಿಸುವ ಪ್ರಮಾಣ ಕಡಿಮೆಯಾಗಿದೆ. ಬದಲಾಗಿ ಮನೆಗೆ ಬೇಕಾಗುವ ಅಡುಗೆ ವಸ್ತುಗಳು, ವೈಯಕ್ತಿಕವಾಗಿ ಬೇಕಾದ ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಗೃಹೋಪಯೋಗಿ ವಸ್ತುಗಳ ಖರೀದಿ ಹೆಚ್ಚಾಗಿದೆ.

ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವ ಗೃಹಿಣಿ ಮತ್ತು ಅದ್ಯಾಪಕಿ ಯೋಗಿತಾ ಅವರು ಹೇಳುವ ಪ್ರಕಾರ, “ಒಂದು ಅಂದಾಜಿನಲ್ಲಿ ಹೇಳುವುದಾದರೆ ಈ ವರ್ಷ ನಾನು ಶೇ 20ರಷ್ಟು ಆಹಾರ, ಶೇ 30ರಷ್ಟು ಎಲೆಕ್ಟ್ರಾನಿಕ್ಸ್, ಶೇ 35ರಷ್ಟು ಬಟ್ಟೆಗಳು ಮತ್ತು ಶೇ 15ರಷ್ಟು ಆಹಾರ ಮತ್ತು ಯುಟಿಲಿಟಿ ಸಂಬಂಧಿತ ವಸ್ತುಗಳಲ್ಲಿ ವೆಚ್ಚ ಮಾಡಿದ್ದೇನೆ.”

ವಾಹನ ಮತ್ತು ಎಲೆಕ್ಟ್ರಾನಿಕ್ ವಸ್ತುಗಳು ಬೇಕು!

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬಹಳಷ್ಟು ಮನೆಗಳು ವಾಹನಗಳು, ಮೊಬೈಲ್ ಫೋನ್‌ಗಳು, ರೆಫ್ರಿಜರೇಟರ್‌ಗಳು ಮತ್ತು ಟಿವಿಗಳನ್ನು ಈಗಾಗಲೇ ಖರೀದಿಸಿದ್ದಾರೆ. ಈಗ ಅವುಗಳು ಅಗತ್ಯ ವಸ್ತುಗಳಾಗಿ ಮಾರ್ಪಾಡಾಗಿವೆ.

ಒಂದು ವರ್ಷದ ಹಿಂದೆ ಮದುವೆಯಾಗಿರುವ ಸಪ್ನಾ, “ಮೂರು ತಿಂಗಳ ಹಿಂದೆ ನಾವು ಟಿವಿ ಮತ್ತು ರೆಫ್ರಿಜರೇಟರ್ ಖರೀದಿಸಿದ್ದೇವೆ. ಅದು ನನಗೆ ಅನಗತ್ಯ ಎಂದು ಅನಿಸಿಲ್ಲ. ಕೆಲವೊಮ್ಮೆ ಮೇಕಪ್ ಐಟಂಗಳನ್ನು ಖರೀದಿಸುವಾಗ ಬೇಕೇ ಎನ್ನುವ ಸಂಶಯ ಬರುತ್ತದೆ” ಎಂದು ಅಭಿಪ್ರಾಯಪಟ್ಟರು.

ಇತ್ತೀಚೆಗೆ ಟಿವಿ ಖರೀದಿಸುವವರ ಸಂಖ್ಯೆ ಕಡಿಮೆಯಾಗಿದ್ದರೂ ವೈಯಕ್ತಿಕ ವಸ್ತುಗಳಾದ ಮೊಬೈಲ್ ಫೋನ್‌ರಗಳನ್ನು ಖರೀದಿಸುವವರು ಹೆಚ್ಚಾಗಿದ್ದಾರೆ. ರೆಫ್ರಿಜರೇಟರ್ ಮತ್ತು ವಾಹನ ಮಾಲೀಕತ್ವ ಏರಿಕೆಯಾಗಿದೆ. ಸಾಲದ ಲಭ್ಯತೆ ಮತ್ತು ಪೂರೈಕೆ ಸರಪಣಿ ವಿಸ್ತಾರವಾಗಿದೆ ಎನ್ನುವುದು ಇದರಿಂದ ತಿಳಿದುಬರುತ್ತದೆ.

ಮಂಗಳೂರಿನ ಕೃಷ್ಣ ಅವರು ತಾವು ಅನಗತ್ಯ ವಸ್ತುಗಳನ್ನು ಹೆಚ್ಚು ಖರೀದಿಸುವುದಿಲ್ಲ ಎಂದು ಉತ್ತರಿಸಿದರು. ಆದರೆ, ಈ ವರ್ಷ ಅವರು ವೈಯಕ್ತಿಕ ಬಳಕೆಗೆ ಎಲೆಕ್ಟ್ರಾನಿಕ್ ವಸ್ತುವೊಂದನ್ನು ಖರೀದಿಸಿದ್ದಾರೆ. “ನಾನು ಅನಗತ್ಯ ಏನೂ ಖರೀದಿಸುವುದಿಲ್ಲ. ಆದರೆ ಈ ವರ್ಷ ಒಂದು ಬ್ಯಾಗ್ ಮತ್ತು ಬ್ಲೂಟೂತ್ ಆಡಿಯೊ ಡಿವೈಸ್ ಖರೀದಿಸಿದ್ದೇನೆ” ಎಂದು ಉತ್ತರಿಸಿದರು ಕೃಷ್ಣ.

ಉಪಭೋಗಿ ವಸ್ತುಗಳಿಂದ ಕೇವಲ ಮಾರಾಟದಲ್ಲಿ ಪ್ರಗತಿ ಮಾತ್ರ ಸಾಧ್ಯವಾಗುವುದಿಲ್ಲ. ಜನರ ಜೀವನಮಟ್ಟವೂ ವೃದ್ಧಿಸುತ್ತದೆ. ವಾಹನ ಖರೀದಿಯಿಂದ ಉದ್ಯೋಗದ ಅವಕಾಶ ಹೆಚ್ಚಾಗುತ್ತದೆ. ರೆಫ್ರಿಜರೇಟರ್‌ನಿಂದ ಆಹಾರ ಸುರಕ್ಷತೆ ಹೆಚ್ಚಾಗುತ್ತದೆ ಮತ್ತು ತ್ಯಾಜ್ಯ ಕಡಿಮೆಯಾಗುತ್ತದೆ. ಮೊಬೈಲ್ ಫೋನ್‌ ನಿಂದ ಮಾಹಿತಿ, ಮಾರುಕಟ್ಟೆ ಮತ್ತು ಡಿಜಿಟಲ್ ಸೇವೆಗಳು ತೆರೆದುಕೊಳ್ಳುತ್ತವೆ.

ಕೊನೆಯ ಮೂರು ತಿಂಗಳಲ್ಲಿ ಅರ್ಥವ್ಯವಸ್ಥೆಯ ಉತ್ತೇಜನ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳನ್ನು ಕಡಿತಗೊಳಿಸಿದ ನಂತರ ಜನರು ಗ್ರಾಹಕ ವಸ್ತುಗಳ ಖರೀದಿಗೆ ಹೆಚ್ಚು ಸಾಲ ಮಾಡುತ್ತಿದ್ದಾರೆ. ಹಾಗೆಂದು ಕ್ರೆಡಿಟ್ ಬ್ಯೂರೋ ಕಂಪೆನಿಯಾದ ಟ್ರಾನ್ಸ್‌ ಯೂನಿಯನ್ ಸಿಬಿಲ್ ವಿವರಗಳು ತೋರಿಸಿರುವ ದತ್ತಾಂಶಗಳಿಂದ ತಿಳಿದುಬಂದಿದೆ. ಮುಖ್ಯವಾಗಿ ದಸರಾ ಮತ್ತು ದೀಪಾವಳಿ ಸಮಯದಲ್ಲಿ ಗ್ರಾಹಕ ಬಾಳಿಕೆಯ ಸಾಲಗಳಿಗೆ (ಕನ್‌ಸ್ಯೂಮರ್ ಡ್ಯೂರೇಬಲ್ ಲೋನ್‌) ಬೇಡಿಕೆ ಹೆಚ್ಚಾಗಿತ್ತು.

2025ರ ಕೊನೆಯ ಕೆಲವು ತಿಂಗಳುಗಳನ್ನು ಮೂರು ಅವಧಿಯಲ್ಲಿ ವಿಭಜಿಸಿ ನೋಡಿದಲ್ಲಿ, ಜಿಎಸ್‌ಟಿ ಕಡಿತಗೊಳಿಸಿರುವುದನ್ನು ಘೋಷಿಸಿದ, ಸೆಪ್ಟೆಂಬರ್ 22ರಂದು ಅದನ್ನು ಅನುಷ್ಠಾನಕ್ಕೆ ತರುವ ಮೊದಲಿನ ಸಮಯ ಮತ್ತು ಅನುಷ್ಠಾನದ ನಂತರದ 10 ದಿನಗಳ ದಸರಾ ಮತ್ತು ದೀಪಾವಳಿ ಹಬ್ಬಗಳ ಪೂರ್ವ ಅವಧಿಯನ್ನು ಹೋಲಿಸಿದರೆ, ಹಬ್ಬದ ಪೂರ್ವದ 20 ದಿನಗಳಲ್ಲಿ ಕನ್‌ಸ್ಯೂಮರ್ ಡ್ಯೂರೇಬಲ್ ಸಾಲಗಳಿಗೆ ಒಂದೂವರೆ ಪಟ್ಟು ಹೆಚ್ಚು ಬೇಡಿಕೆ ಇತ್ತು.

“ಜಿಎಸ್‌ಟಿ 2.0 ಅರ್ಥ ವ್ಯವಸ್ಥೆಯ ಪ್ರಗತಿಗೆ ಅಗತ್ಯವಾಗಿದ್ದ ಪ್ರಚೋದನೆಯಾಗಿತ್ತು. ಗ್ರಾಹಕ ಸಂವೇದನೆಯಲ್ಲಿ ಸುಧಾರಣೆ ಮತ್ತು ಸಾಲದ ಬೇಡಿಕೆಯಲ್ಲಿ ಸಕಾರಾತ್ಮಕ ಪರಿಣಾಮ ಸ್ಪಷ್ಟವಾಗಿ ಕಂಡುಬಂದಿದೆ” ಎಂದು ಟ್ರಾನ್ಸ್‌ಯೂನಿಯನ್ ಸಿಬಿಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭವೇಶ್ ಜೈನ್ ಹೇಳಿದ್ದಾರೆ.

ಬೆಂಗಳೂರಿನ ನಿವಾಸಿ ಇರ್ಷಾದ್ ಅವರು ಜಿಎಸ್‌ಟಿ ಕಡಿತದ ನಂತರ ದ್ವಿಚಕ್ರ ವಾಹನ ಖರೀದಿಸಿದ್ದಾರೆ. ಆದರೆ ಅವರು ಸಂಪೂರ್ಣ ಕೈಸಾಲದಲ್ಲಿ ವಾಹನ ಖರೀದಿಸಿದ್ದಾರೆಯೇ ವಿನಾ ಮಾಸಿಕ ಕಂತಿನ ಮೇಲಲ್ಲ. “ಜಿಎಸ್‌ಟಿ ಕಡಿತ ಮಾಡಿದ ಕಾರಣ ನನಗೆ 15,000 ರೂ. ಉಳಿತಾಯವಾಯಿತು. ಪಡೆದ ಸಾಲವನ್ನು ಸ್ವಲ್ಪ ಸ್ವಲ್ಪ ಮರು ತೀರಿಸುತ್ತಿದ್ದೇನೆ” ಎಂದು ಉತ್ತರಿಸಿದರು.

ಸಾಲ ಮರುಪಾವತಿಯಲ್ಲಿ ವಿಳಂಬ

ಗ್ರಾಹಕ ಸಾಲಗಳನ್ನು ಹೊರತುಪಡಿಸಿ ಜನರು ದ್ವಿಚಕ್ರ ವಾಹನಗಳಿಗೆ ಹೆಚ್ಚು ಸಾಲಗಳನ್ನು ಪಡೆದಿದ್ದಾರೆ. ದ್ವಿಚಕ್ರ ವಾಹನಗಳ ಖರೀದಿ ಹೆಚ್ಚಾಗಿರುವುದು ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ಸುಧಾರಣೆಯಾಗಿರುವುದಕ್ಕೆ ಸಂಬಂಧಿಸಿದೆ. ಆದರೆ ದ್ವಿಚಕ್ರ ವಾಹನದ ವಿಭಾಗದಲ್ಲಿ ಪಾವತಿ ಒತ್ತಡಗಳು ಮತ್ತು ಪಾವತಿಸದೆ ಇರುವ ಪ್ರಮಾಣ ಅತ್ಯಧಿಕ ಇರುವುದು ಮುಂದುವರಿದಿದೆ. ಈ ವಿಭಾಗದಲ್ಲಿ ಸಾಲ ಮರುಪಾವತಿಯಲ್ಲಿ ವಿಳಂಬದ ಪ್ರಮಾಣ ಹೆಚ್ಚಿದೆ. 2024-25ರ ಅಂತ್ಯದ ಶೇ 3.1ಕ್ಕೆ ಹೋಲಿಸಿದಲ್ಲಿ 2025-26 ಅಂತ್ಯದಲ್ಲಿ ಶೇ 3.7ರಷ್ಟು ಕೆಟ್ಟ ಸಾಲಗಳ ಪ್ರಮಾಣ ಹೆಚ್ಚಾಗಿದೆ. ಅದೇ ಸಂದರ್ಭದಲ್ಲಿ ಸಮಯಕ್ಕೆ ಸರಿಯಾದ ಪಾವತಿಯು 290 ಮೂಲಾಂಶಗಳಷ್ಟು ಕುಸಿದು ಶೇ 86.8ರಷ್ಟಕ್ಕೆ ತಲುಪಿದೆ.

ನೀತಿ ನಿರೂಪಣೆ ಅಗತ್ಯ

ಗ್ರಾಹಕ ವಸ್ತುಗಳ ಏರಿಕೆಗೆ ತಕ್ಕಂತೆ ನೀತಿ ನಿರೂಪಣೆಯ ಅಗತ್ಯವಿರುತ್ತದೆ. ನಗರದಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಾಹನಗಳು ಏರಿದಂತೆ ಮೂಲಸೌಕರ್ಯ ಅಭಿವೃದ್ಧಿಯಾಗಬೇಕಿದೆ. ಸಾಗಾಟ ಮತ್ತು ನಗರ ಯೋಜನೆ ಸುಧಾರಿಸಬೇಕು. ಇಲ್ಲದೆ ಹೋದರೆ ಸಾರಿಗೆ ದಟ್ಟಣೆ, ಮಾಲಿನ್ಯ ಮತ್ತು ನಗರದ ಗುಣಮಟ್ಟದ ಜೀವನದ ಕೊರತೆ ಕಂಡುಬರಬಹುದು. ಸಾರ್ವಜನಿಕ ಸಾರಿಗೆ ಮೂಲಸೌಕರ್ಯವನ್ನು ಸದೃಢಗೊಳಿಸುವುದು ಕೇವಲ ಪರಿಸರಕ್ಕೆ ಮಾತ್ರವಲ್ಲ, ಅರ್ಥ ವ್ಯವಸ್ಥೆಗೂ ಅಗತ್ಯ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News