×
Ad

ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆ ಭಾರತೀಯ ವಾಯು ಪಡೆಯಿಂದ ಹಾನಿಗೀಡಾಗಿದ್ದ ಮುರಿದ್ ನಲ್ಲಿನ ಕಟ್ಟಡದ ಸುತ್ತ ಬೃಹತ್ ಟಾರ್ಪಾಲಿನ್ ಹೊದಿಕೆ

Update: 2025-12-18 22:53 IST

Photo Credit : NDTV 

ಹೊಸದಿಲ್ಲಿ: ಮೇ 10ರ ಮುಂಜಾನೆ ಭಾರತೀಯ ವಾಯು ಪಡೆ ನಡೆಸಿದ್ದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆ ತೀವ್ರ ಹಾನಿಗೀಡಾಗಿದ್ದ ಪಾಕಿಸ್ತಾನದ ಮುರಿದ್ ವಾಯು ನೆಲೆಯ ಬಳಿಯ ಪ್ರಮುಖ ಕಮಾಂಡಿಂಗ್ ಮತ್ತು ನಿಯಂತ್ರಣ ಕಟ್ಟಡದ ಸುತ್ತ ಭಾರಿ ಪ್ರಮಾಣದ ಮರು ನಿರ್ಮಾಣ ಕಾಮಗಾರಿಗಳು ನಡೆಯುತ್ತಿರುವ ದೃಶ್ಯಗಳು ತನಗೆ ಲಭ್ಯವಾಗಿರುವ ಇತ್ತೀಚಿನ ಹೈ ರೆಸಲ್ಯೂಷನ್ ಉಪಗ್ರಹ ಚಿತ್ರಗಳಲ್ಲಿ ಕಂಡು ಬಂದಿವೆ ಎಂದು ndtv.com ವರದಿ ಮಾಡಿದೆ. 

ಈ ವರದಿಯಲ್ಲಿ ಒದಗಿಸಲಾಗಿರುವ ಡಿಸೆಂಬರ್ 16ರ ಉಪಗ್ರಹ ಚಿತ್ರವು ಪಾಕಿಸ್ತಾನ ಕಾರ್ಯಾಚರಿಸುವ ಮಾನವರಹಿತ ವೈಮಾನಿಕ ವಾಹನಗಳ ಬೃಹತ್ ಸಂಕೀರ್ಣದ ಪಕ್ಕದಲ್ಲಿರುವ ಕಟ್ಟಡಕ್ಕೆ ದೊಡ್ಡ ಗಾತ್ರದ ಟಾರ್ಪಾಲಿನ್ ಹೊದಿಸಿರುವ ದೃಶ್ಯ ಕಂಡು ಬಂದಿದೆ. ಭಾರತೀಯ ವಾಯು ಪಡೆ ನಡೆಸಿದ ದಾಳಿಯ ವೇಳೆ ಈ ಕಟ್ಟಡದ ಚಾವಣಿಯ ಕೆಲ ಭಾಗ ಹಾನಿಗೀಡಾಗಿದ್ದು, ಭಾರಿ ಪ್ರಮಾಣದ ಕಟ್ಟಡ ಹಾನಿ ಹಾಗೂ ಸಂಭವನೀಯ ಆಂತರಿಕ ಕಟ್ಟಡದ ನಾಶವಾಗಿದೆ ಎಂದು ಭಾವಿಸಲಾಗಿದೆ. 

ಈ ವರ್ಷದ ಜೂನ್ ತಿಂಗಳಲ್ಲಿ ಲಭ್ಯವಾಗಿದ್ದ ವಾಯು ದಾಳಿಯೋತ್ತರ ಉಪಗ್ರಹ ಚಿತ್ರಗಳಲ್ಲಿ ಆಗ ಈ ಕಟ್ಟಡದ ಸುತ್ತ ಹಸಿರು ಟಾರ್ಪಾಲಿನ್ ಹೊದಿಸಿರುವುದು ಕಂಡು ಬಂದಿತ್ತು. ಆದರೀಗ ಬೃಹತ್ ಟಾರ್ಪಾಲಿನ್ ಅಡಿ ಇಡೀ ಕಟ್ಟಡದ ದುರಸ್ತಿ ಕಾರ್ಯ ನಡೆಯುತ್ತಿದೆ ಅಥವಾ ಮರು ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂಬಂತೆ ಕಂಡು ಬಂದಿದೆ. ಭಾರಿ ಗಾತ್ರದ ಟಾರ್ಪಾಲಿನ್ ಗಳನ್ನು ಸೇನೆಗಳು ಸಾಮಾನ್ಯವಾಗಿ ದುರಸ್ತಿ ಕಾರ್ಯ, ಅವಶೇಷಗಳ ತೆರವು ಅಥವಾ ಸೂಕ್ಷ್ಮ ಹಾನಿಯನ್ನು ಉಪಗ್ರಹಗಳ ಕಣ್ಗಾವಲಿನಿಂದ ತಪ್ಪಿಸಲು ಬಳಸುತ್ತವೆ. 

ಆರಂಭಿಕ ಉಪಗ್ರಹ ಚಿತ್ರಗಳ ಪ್ರಕಾರ, ಭಾರತೀಯ ವಾಯು ಸೇನೆಯ ದಾಳಿಯಲ್ಲಿ ಕಟ್ಟಡದ ಮೇಲ್ಚಾವಣಿಯ ಕೆಲವು ನಿರ್ದಿಷ್ಟ ಭಾಗಗಳು ತೂತು ಬಿದ್ದಿರುವುದು ಕಂಡು ಬಂದಿತ್ತು. ನಿರ್ದಿಷ್ಟ ಗುರಿಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಯಾವ ಶಸ್ತ್ರಾಸ್ತ್ರಗಳನ್ನು ಬಳಸಲಾಗಿದೆ ಎಂಬ ಕುರಿತು ಭಾರತೀಯ ವಾಯು ಪಡೆ ಇದುವರೆಗೂ ಬಹಿರಂಗಪಡಿಸಿಲ್ಲವಾದರೂ, ವಿಳಂಬಿತ ಫ್ಯೂಸ್ ಛೇದಕವನ್ನು ಹೊತ್ತು ನಿಖರವಾಗಿ ನಿರ್ದೇಶಿಸಲ್ಪಟ್ಟ ಕ್ಷಿಪಣಿಯಂತಹ ಚಾವಣಿಯನ್ನು ಭೇದಿಸುವ ಸಿಡಿಗುಂಡುಗಳನ್ನು ಹೊಂದಿರುವ ಕ್ಷಿಪಣಿಗಳನ್ನು ಬಳಸಿ ಮುರಿದ್ ಸೇನಾ ನೆಲೆಯ ಮೇಲೆ ದಾಳಿ ನಡೆಸಿರುವಂತೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯೋತ್ತರ ಉಪಗ್ರಹ ಚಿತ್ರಗಳಲ್ಲಿ ಕಂಡು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News