“ಒಂದೇ ದಿನ 20 ವರ್ಷಗಳ MGNREGA ಸಾಧನೆ ಧ್ವಂಸಗೊಳಿಸಿದ ಸರಕಾರ” : VB-G RAM G ಮಸೂದೆ ಬಗ್ಗೆ ರಾಹುಲ್ ಗಾಂಧಿ ವಾಗ್ದಾಳಿ
ರಾಹುಲ್ ಗಾಂಧಿ (Photo: PTI)
ಹೊಸದಿಲ್ಲಿ: ಮೋದಿ ಸರಕಾರ 20 ವರ್ಷಗಳ MGNREGA ಯೋಜನೆಯ ಸಾಧನೆಯನ್ನು ಒಂದೇ ದಿನದಲ್ಲಿ ಧ್ವಂಸಗೊಳಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ VB-G RAM G ಮಸೂದೆ ಬಗ್ಗೆ ವಾಗ್ದಾಳಿಯನ್ನು ನಡೆಸಿದ್ದಾರೆ.
ಹೊಸ VB-G RAM G ಮಸೂದೆ ಗ್ರಾಮ ವಿರೋಧಿಯಾಗಿದೆ. ನಿನ್ನೆ ಒಂದೇ ರಾತ್ರಿ ಮೋದಿ ಸರಕಾರ MGNREGA ಯೋಜನೆಯ 20 ವರ್ಷಗಳ ಸಾಧನೆಯನ್ನು ನಾಶಪಡಿಸಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದು ಹಕ್ಕು ಆಧಾರಿತ, ಬೇಡಿಕೆ ಆಧಾರಿತ ಖಾತರಿಯನ್ನು ನಾಶಗೊಳಿಸಿ ದಿಲ್ಲಿಯಿಂದ ನಿಯಂತ್ರಿತವಾದ ರೇಷನ್ ಆಧಾರಿತ ಯೋಜನೆಯಾಗಿ ಪರಿವರ್ತಿತವಾಗುತ್ತದೆ. ಇದು ರಾಜ್ಯ ವಿರೋಧಿ ಮತ್ತು ಗ್ರಾಮ ವಿರೋಧಿಯಾಗಿದೆ. MGNREGA ಗ್ರಾಮೀಣ ಕಾರ್ಮಿಕರಿಗೆ ಚೌಕಾಸಿ ಮಾಡುವ ಶಕ್ತಿಯನ್ನು ನೀಡಿತ್ತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
MGNREGA ಮೂಲಕ ಶೋಷಣೆ ಮತ್ತು ವಲಸೆ ಕಡಿಮೆಯಾಗಿತ್ತು. ವೇತನ ಹೆಚ್ಚಾಗಿತ್ತು. ಕೆಲಸದ ಪರಿಸ್ಥಿತಿಗಳು ಸುಧಾರಿಸಿದ್ದವು. ಇವೆಲ್ಲವೂ ಗ್ರಾಮೀಣ ಮೂಲಸೌಕರ್ಯಗಳನ್ನು ನಿರ್ಮಿಸಲು ಮತ್ತು ಪುನರುಜ್ಜೀವನದತ್ತ ನಡೆಯಿತು. ಇದನ್ನು ಈ ಸರಕಾರ ಮುರಿಯಲು ಬಯಸುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಕೆಲಸಕ್ಕೆ ಮಿತಿ ಹೇರುವ ಮೂಲಕ ಮತ್ತು ಅದನ್ನು ನಿರಾಕರಿಸಲು ಹೆಚ್ಚಿನ ಮಾರ್ಗಗಳನ್ನು ಸೃಷ್ಟಿಸುವ ಮೂಲಕ VB-G RAM G ಮಸೂದೆಯು ಗ್ರಾಮೀಣ ಬಡವರು ಹೊಂದಿದ್ದ ಒಂದು ಅಸ್ತ್ರವನ್ನು ದುರ್ಬಲಗೊಳಿಸುತ್ತಿದೆ. ಕೋವಿಡ್ ಸಮಯದಲ್ಲಿ MGNREGA ಎಂದರೆ ಏನು ಎಂದು ನಾವು ನೋಡಿದ್ದೇವೆ. ಆರ್ಥಿಕತೆ ಸ್ಥಗಿತಗೊಂಡು ಜೀವನೋಪಾಯ ಕುಸಿದಾಗ, ಅದು ಕೋಟ್ಯಂತರ ಜನರು ಹಸಿವು ಮತ್ತು ಸಾಲಕ್ಕೆ ಬೀಳದಂತೆ ತಡೆದಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.