ಅತ್ಯಾಚಾರ ದೂರು ದಾಖಲಿಸಿದ ‘ಲಿವ್-ಇನ್’ ಸಂಗಾತಿಯನ್ನು ಕೊಂದು, ಪತ್ನಿ ಸಹಾಯದಿಂದ ಮೃತದೇಹವನ್ನು ನಾಲೆಗೆ ಎಸೆದ ವ್ಯಕ್ತಿ
ನೈನಾ ಮಹತ್ (Photo credit: NDTV)
ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ 28 ವರ್ಷದ ಯುವತಿಯೊಬ್ಬಳನ್ನು ಆಕೆಯ ಲಿವ್-ಇನ್ ಸಂಗಾತಿ ಕೊಲೆ ಮಾಡಿದ ಘಟನೆ ವರದಿಯಾಗಿದ್ದು ಮೃತದೇಹವನ್ನು ನೆರೆಯ ಗುಜರಾತ್‌ನ ವಲ್ಸಡ್ ಎಂಬಲ್ಲಿನ ನಾಲೆಯೊಂದಕ್ಕೆ ಎಸೆಯಲು ಆರೋಪಿಯ ಪತ್ನಿ ನೆರವಾಗಿದ್ದಳೆಂದು ಆರೋಪಿಸಲಾಗಿದೆ.
ಹತ್ಯೆಗೀಡಾದ ಯುವತಿ ತನ್ನ ಲಿವ್-ಇನ್ ಸಂಗಾತಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರಿಂದ ಆತ ಆಕ್ರೋಶಗೊಂಡು ಈ ಕೃತ್ಯ ನಡೆಸಿದ್ದಾನೆ ಎಂದು ತಿಳಿಯಲಾಗಿದೆ.
ಯುವತಿಯನ್ನು ನೈನಾ ಮಹತ್ ಎಂದು ಗುರುತಿಸಲಾಗಿದೆ. ಆಕೆ ಚಿತ್ರೋದ್ಯಮದಲ್ಲಿ ಮೇಕಪ್ ಆರ್ಟಿಸ್ಟ್ ಆಗಿದ್ದಳು. ಆರೋಪಿ ಮನೋಹರ್ ಶುಲ್ಕಾ ಜೊತೆ ಆಕೆ ಐದು ವರ್ಷದಿಂದ ವಾಸವಾಗಿದ್ದಳು. ಆತ ವಸ್ತ್ರ ವಿನ್ಯಾಸಕನಾಗಿ ಕೆಲಸ ಮಾಡುತ್ತಿದ್ದ.
ತನ್ನನ್ನು ಮದುವೆಯಾಗುವಂತೆ ಶುಕ್ಲಾ ಮೇಲೆ ನೈನಾ ಒತ್ತಡ ಹೇರುತ್ತಿದ್ದರೂ ಆತ ನಿರಾಕರಿಸಿದ್ದನೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆಕೆ ಎಸಿಪಿ ಪದ್ಮಜಾ ಬಡೆ ಅವರಿಗೆ ದೂರು ದಾಖಲಿಸಿ ಆತನ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದಳು. ಇದರಿಂದ ಕ್ರೋಧಗೊಂಡ ಮನೋಹರ್, ಪ್ರಕರಣ ವಾಪಸ್ ಪಡೆಯುವಂತೆ ಆಕೆಗೆ ಸೂಚಿಸಿದ್ದ. ಆದರೆ ಆಕೆ ನಿರಾಕರಿಸಿದಾಗ ಆಕೆಯನ್ನು ಹತ್ಯೆ ಮಾಡಿದ್ದಾನೆ.
ನಂತರ ತನ್ನ ಪತ್ನಿಯ ಸಹಾಯ ಕೋರಿದ ಶುಕ್ಲಾ ಆಕೆಯ ಮೃತದೇಹವನ್ನು ಸೂಟ್‌ಕೇಸಿಗೆ ತುರುಕಿಸಿ ವಲ್ಸಾಡ್ ಎಂಬಲ್ಲಿ ನಾಲೆಗೆ ಎಸೆದಿದ್ದ. ಈ ಘಟನೆ ಆಗಸ್ಟ್ 9ರಂದು ನಡೆದಿತ್ತು.
ಆಗಸ್ಟ್ 12ರಂದು ನೈನಾ ಕುಟುಂಬ ನಾಪತ್ತೆ ಪ್ರಕರಣ ದಾಖಲಿಸಿತ್ತು. ಆಕೆಯ ಫೋನ್ ಸ್ವಿಚ್ಡ್ ಆಫ್ ಆಗಿದ್ದನ್ನು ಗಮನಿಸಿ ಕುಟುಂಬ ಪೊಲೀಸ್ ಮೊರೆ ಹೋಗಿತ್ತು.
ಆರೋಪಿ ಶುಕ್ಲಾ ಮತ್ತವನ ಪತ್ನಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಆರೋಪಿ ವಿರುದ್ಧ ಇನ್ನೊಂದು ಠಾಣೆಯಲ್ಲಿ ಅದಾಗಲೇ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣವಿದೆ ಎಂದು ಹೇಳಲಾಗಿದ್ದು ಈ ಕುರಿತು ಅಧಿಕಾರಿಗಳು ಹೆಚ್ಚಿನ ಮಾಹಿತಿ ನೀಡಿಲ್ಲ.