ನಾಗರಿಕ ಸೇವಾ ಪರೀಕ್ಷೆಗೆ UPSCಯಿಂದ ಹೊಸ ಮಾದರಿಯ ಆನ್ ಲೈನ್ ಅರ್ಜಿ ನಮೂನೆ ಪರಿಚಯ: ರಾಜ್ಯಸಭೆಗೆ ಮಾಹಿತಿ ನೀಡಿದ ಸಚಿವ ಜಿತೇಂದ್ರ ಸಿಂಗ್
Photo | PTI
ಹೊಸದಿಲ್ಲಿ : ಕೇಂದ್ರ ಲೋಕ ಸೇವಾ ಆಯೋಗ 2025ರ ನಾಗರಿಕ ಸೇವಾ ಪರೀಕ್ಷೆಗೆ ನೋಂದಣಿ ಮತ್ತು ಆನ್ ಲೈನ್ ಅರ್ಜಿ ಸಲ್ಲಿಕೆಗೆ ವಿವರವಾದ ಅರ್ಜಿ ನಮೂನೆ(DAF)-I ಮತ್ತು DAF-II ಬದಲಿಗೆ ಹೊಸ ಮಾದರಿಯ ಆನ್ ಲೈನ್ ಅರ್ಜಿ ನಮೂನೆಯನ್ನು ಪರಿಚಯಿಸಿದೆ.
ಈ ಕುರಿತು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಗುರುವಾರ ರಾಜ್ಯಸಭೆಗೆ ಲಿಖಿತವಾಗಿ ಮಾಹಿತಿ ನೀಡಿದ್ದು, ನಾಗರಿಕ ಸೇವಾ ಪರೀಕ್ಷೆಗೆ ನೋಂದಣಿ ಮತ್ತು ಆನ್ ಲೈನ್ ಅರ್ಜಿ ಸಲ್ಲಿಕೆಗೆ ಹೊಸ ಮಾದರಿಯ ಆನ್ ಲೈನ್ ಅರ್ಜಿ ನಮೂನೆಯನ್ನು ಪರಿಚಯಿಸಿದೆ. ಆನ್ ಲೈನ್ ಅರ್ಜಿ ನಮೂನೆಯಲ್ಲಿ ಜನ್ಮ ದಿನಾಂಕ, ಮೀಸಲಾತಿಗೆ ಸಂಬಂಧಿಸಿ ವರ್ಗ ಮತ್ತು ಇತರ ಶೈಕ್ಷಣಿಕ ಅರ್ಹತೆಗಳಂತಹ ವಿವಿಧ ದಾಖಲೆಗಳನ್ನು ದಾಖಲಿಸುವುದು ಕಡ್ಡಾಯವಾಗಿದೆ. ನೋಂದಣಿ ವೇಳೆ ಆನ್ ಲೈನ್ ಅರ್ಜಿ ನಮೂನೆಯೊಂದಿಗೆ ಅಗತ್ಯ ಮಾಹಿತಿ ಅಥವಾ ದಾಖಲೆಗಳನ್ನು ಒದಗಿಸಲು ವಿಫಲವಾದರೆ ಪರೀಕ್ಷೆಗೆ ಹಾಜರಾತಿಗೆ ಅವಕಾಶವನ್ನು ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ.
ಭಾರತೀಯ ಆಡಳಿತ ಸೇವೆ (IAS), ಭಾರತೀಯ ವಿದೇಶಾಂಗ ಸೇವೆ (IFS) ಮತ್ತು ಭಾರತೀಯ ಪೊಲೀಸ್ ಸೇವೆ (IPS)ಗೆ ಅಧಿಕಾರಿಗಳ ನೇಮಕಾತಿಗೆ UPSC ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ, ಸಂದರ್ಶನ ಎಂಬಂತೆ ಮೂರು ಹಂತಗಳಲ್ಲಿ ನಾಗರಿಕ ಸೇವಾ ಪರೀಕ್ಷೆಯನ್ನು ನಡೆಸುತ್ತದೆ. ಪ್ರಸ್ತುತ ನಾಗರಿಕ ಸೇವೆಗಳ (ಮುಖ್ಯ) ಪರೀಕ್ಷೆಯ ಐಚ್ಛಿಕ ವಿಷಯಗಳ ಪಟ್ಟಿಯಲ್ಲಿ ವೈದ್ಯಕೀಯ ವಿಜ್ಞಾನವು ಒಂದು ವಿಷಯವಾಗಿದೆ ಎಂದು ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.