×
Ad

ಜರ್ಮನಿಯಲ್ಲಿ ರಾಹುಲ್ ಭಾರತದ ಶತ್ರುಗಳನ್ನು ಭೇಟಿಯಾಗಿದ್ದಾರೆ: ಬಿಜೆಪಿ ಆರೋಪ

Update: 2025-12-20 20:41 IST

Photo Credit: X/@INCOverseas

ಹೊಸದಿಲ್ಲಿ,ಡಿ.20: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚೆಗೆ ಜರ್ಮನಿಗೆ ಭೇಟಿ ನೀಡಿದ ಸಂದರ್ಭ ಭಾರತದ ಶತ್ರುಗಳನ್ನು ಭೇಟಿಯಾಗಿದ್ದರು ಎಂದು ಬಿಜೆಪಿ ಶನಿವಾರ ಆಪಾದಿಸಿದೆ.

ಬರ್ಲಿನ್ ಮೂಲದ ಹರ್ಟಿ ಸ್ಕೂಲ್‌ನ ಅಧ್ಯಕ್ಷ ಹಾಗೂ ಪ್ರೊಫೆಸರ್ ಕೊರ್ನೆಲಿಯಾ ವೂಲ್ ಅವರನ್ನು ರಾಹುಲ್ ಭೇಟಿಯಾಗಿರುವುದನ್ನು ಖಂಡಿಸಿರುವ ಪಕ್ಷವು, ಇಂತಹ ಶಕ್ತಿಗಳ ಜೊತೆ ಕೈಜೋಡಿಸುವ ಮೂಲಕ ಲೋಕಸಭೆಯ ಪ್ರತಿಪಕ್ಷ ನಾಯಕನು ದೇಶದ ವಿರುದ್ಧ ಯಾವ ಸಂಚನ್ನು ರೂಪಿಸುತ್ತಿದ್ದಾರೆ ಎಂದು ಪ್ರಶ್ನಿಸಿದೆ.

ಹೊಸದಿಲ್ಲಿಯಲ್ಲಿನ ಬಿಜೆಪಿ ಮುಖ್ಯ ಕಾರ್ಯಾಲಯದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಅವರು ಮಾತನಾಡಿ, ರಾಹುಲ್ ಗಾಂಧಿ ಹಾಗೂ ಕೊರ್ನೆಲಿಯಾ ವೂಲ್ ಅವರು ಜೊತೆಗಿರುವ ಛಾಯಾಚಿತ್ರವನ್ನು ಪ್ರದರ್ಶಿಸಿದರು. ಕಾಂಗ್ರೆಸ್ ನಾಯಕನುಎ ಜರ್ಮನಿಯಲ್ಲಿ ಭಾರತ ವಿರೋಧಿ ಶಕ್ತಿಗಳನ್ನು ಭೇಟಿಯಾಗಿರುವುದಕ್ಕೆ ಇದೊಂದು ಪುರಾವೆಯಾಗಿದೆಯೆಂದು ಅವರು ಹೇಳಿದ್ದಾರೆ.

ಕೊರ್ನೆಲಿಯಾ ವೂಲ್ ಅವರ, ಅಮೆರಿಕ ಮೂಲದ ಬಿಲಿಯಾಧೀಶ, ಹೂಡಿಕೆದಾರ ಜಾರ್ಜ್ ಸೊರೊಸ್ ಅವರ ಓಪನ್ ಸೊಸೈಟಿ ಪ್ರತಿಷ್ಠಾನದ ಹಣಕಾಸು ನೆರವಿನೊಂದಿಗೆ ನಡೆಯುತ್ತಿರುವ ಕೇಂದ್ರೀಯ ಯುರೋಪಿಯನ್ ವಿವಿಯ ಟ್ರಸ್ಟಿಗಳಲ್ಲೊಬ್ಬರಾಗಿದ್ದಾರೆ.

ಜಾರ್ಜ್ ಸೊರೊಸ್ ಅವರು ಭಾರತ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಹಾಗೂ ದೇಶದಲ್ಲಿ ಅಶಾಂತಿಯನ್ನು ಸೃಷ್ಟಿಸಲು ನಿಧಿ ಪೂರೈಕೆ ಮಾಡುತ್ತಿದ್ದಾರೆ ಮತ್ತು ದೇಶದ ಸಮಗ್ರತೆ ಮತ್ತು ಸಾರ್ವಭೌಮತೆ ಮೇಲೆ ದಾಳಿ ನಡೆಸುತ್ತಿದ್ದಾರೆಂದು ಭಾಟಿಯಾ ಆಪಾದಿಸಿದರು.

ಆದರೆ ಬಿಜೆಪಿಯ ಈ ಆರೋಪಕ್ಕೆ ರಾಹುಲ್‌ ಅವರಾಗಲಿ ಅಥವಾ ಕಾಂಗ್ರೆಸ್ ಪಕ್ಷವಾಗಲಿ ಯಾವುದೇ ಹೇಳಿಕೆಯನ್ನು ನೀಡಲಿಲ್ಲ.

ಜಾರ್ಜ್ ಸೊರೊಸ್ ಅವರ ಆರ್ಥಿಕ ನೆರವಿನಿಂದ ನಡೆಯುವ, ಭಾರತ ವಿರೋಧಿ ಚಟುವಟಿಕೆಗಳಲ್ಲಿ ಶಾಮೀಲಾಗಿರುವ ಸಂಘಟನೆಗಳ ಜೊತೆ ಕಾಂಗ್ರೆಸ್ ನಾಯಕರಿಗೆ ನಂಟಿದೆಯೆಂದು ಕಳೆದ ವರ್ಷವೂ ಬಿಜೆಪಿ ಆಪಾದಿಸಿತ್ತು.

ವಿದೇಶಿ ನೆಲದಲ್ಲಿ ಭಾರತ ವಿರೋಧಿ ಶಕ್ತಿಗಳನ್ನು ಯಾರಾದರೂ ಭೇಟಿಯಾದಲ್ಲಿ ಹಾಗೂ ಭಾರತವನ್ನು ಅಪಮಾನಿಸುವವರು ಯಾರಾದರೂ ಇದ್ದರೆ, ಅದು ರಾಹುಲ್ ಗಾಂಧಿಯವರಲ್ಲದೆ ಮತ್ತ್ಯಾರೂ ಅಲ್ಲವೆಂದು ಭಾಟಿಯಾ ಆಪಾದಿಸಿದರು.

ಹೆಚ್ಚುಕಮ್ಮಿ ಸಂಸತ್‌ ನ ಪ್ರತಿಯೊಂದು ಅಧಿವೇಶನದ ಸಂದರ್ಭದಲ್ಲೂ ರಾಹುಲ್ ಅವರು ಭಾರತದ ಬಗ್ಗೆ ಮಾತ್ಸರ್ಯವನ್ನು ಹೊಂದಿರುವ ಹಾಗೂ ಅದರ ಏಕತೆಯ ಮೇಲೆ ದಾಳಿ ನಡೆಸುತ್ತಿರುವ ಭಾರತ ವಿರೋಧಿಗಳನ್ನು ಭೇಟಿಯಾಗಲು ತೆರಳುತ್ತಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News