ಕೋಲ್ಕತ್ತಾ ಕಾರ್ಯಕ್ರಮದ ಬಗ್ಗೆ Messi ಅಸಮಾಧಾನ: SITಗೆ ತಿಳಿಸಿದ ಬಂಧಿತ ಮುಖ್ಯ ಸಂಘಟಕ
ಲಿಯೊನೆಲ್ ಮೆಸ್ಸಿ | Photo Credit : PTI
ಕೋಲ್ಕತ್ತಾ: ಡಿಸೆಂಬರ್ 13ರಂದು ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಫುಟ್ ಬಾಲ್ ತಾರೆ ಲಿಯೊನೆಲ್ ಮೆಸ್ಸಿ ಕಾರ್ಯಕ್ರಮದಲ್ಲಿ ತಮ್ಮನ್ನು ಸ್ಪರ್ಶಿಸುವ ಅಥವಾ ಅಪ್ಪಿಕೊಳ್ಳುವ ಬಗ್ಗೆ ಅವರು ಅಸಮಾಧಾನ ಹೊಂದಿದ್ದರು. ಅದಕ್ಕಾಗಿ ಅವರು ನಿಗದಿತ ವೇಳಾಪಟ್ಟಿಗಿಂತ ಮುಂಚಿತವಾಗಿಯೇ ಅವರು ಅಲ್ಲಿಂದ ನಿರ್ಗಮಿಸಿದ್ದರು ಎಂದು ಲಿಯೊನೆಲ್ ಮೆಸ್ಸಿ ಕಾರ್ಯಕ್ರಮದಲ್ಲಿ ಆಗಿದ್ದ ಗದ್ದಲದ ಘಟನೆಗೆ ಸಂಬಂಧಿಸಿದಂತೆ ಬಂಧಿತನಾಗಿರುವ ಮುಖ್ಯ ಸಂಘಟಕ ಸತದ್ರು ದತ್ತ ಹೇಳಿದ್ದಾನೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
ಲಿಯೊನೆಲ್ ಮೆಸ್ಸಿ ಕಾರ್ಯಕ್ರಮದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಸುದೀರ್ಘ ವಿಚಾರಣೆಯ ವೇಳೆ, “ಲಿಯೊನೆಲ್ ಮೆಸ್ಸಿ ತಮ್ಮನ್ನು ಸ್ಪರ್ಶಿಸುವುದಾಗಲಿ ಅಥವಾ ಹಿಂಬದಿಯಿಂದ ಅಪ್ಪಿಕೊಳ್ಳುವುದನ್ನಾಗಲಿ ಇಷ್ಟಪಟ್ಟಿರಲಿಲ್ಲ ಹಾಗೂ ಅವರ ಈ ಕಳವಳವನ್ನು ಲಿಯೊನೆಲ್ ಮೆಸ್ಸಿಯ ಭದ್ರತೆಯ ಹೊಣೆಯನ್ನು ಹೊಂದಿದ್ದ ವಿದೇಶಿ ಭದ್ರತಾಧಿಕಾರಿಗಳಿಗೆ ಮುಂಚಿತವಾಗಿಯೇ ತಿಳಿಸಲಾಗಿತ್ತು” ಎಂದು ಸತದ್ರು ದತ್ತ ತಿಳಿಸಿದ್ದಾನೆ ಎಂದು ಹೇಳಲಾಗಿದೆ.
“ಜನಜಂಗುಳಿಗೆ ತಾಳ್ಮೆಯಿಂದಿರುವಂತೆ ಪದೇ ಪದೇ ಸಾರ್ವಜನಿಕ ಪ್ರಕಟನೆಯ ಮೂಲಕ ಮನವಿ ಮಾಡಿದರೂ, ಅದರಿಂದ ಯಾವುದೇ ಪರಿಣಾಮವುಂಟಾಗಲಿಲ್ಲ. ಮೆಸ್ಸಿಯನ್ನು ಸುತ್ತುವರಿದ ರೀತಿ ಹಾಗೂ ಅವರನ್ನು ಆಲಂಗಿಸಿದ ರೀತಿ ಅವರಿಗೆ ಸಂಪೂರ್ಣವಾಗಿ ಅಸ್ವೀಕಾರಾರ್ಹವಾಗಿತ್ತು” ಎಂದು ಸತದ್ರು ದತ್ತ ಶುಕ್ರವಾರ ನಡೆದ ವಿಚಾರಣೆಯ ವೇಳೆ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಲಿಯೊನೆಲ್ ಮೆಸ್ಸಿ ಕಾರ್ಯಕ್ರಮದುದ್ದಕ್ಕೂ ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ಅವರಿಗೆ ತೀರಾ ಸನಿಹವಿರುವುದು ಹಾಗೂ ಛಾಯಾಚಿತ್ರಗಳಿಗೆ ಭಂಗಿಗಳನ್ನು ನೀಡುವಾಗ ಅವರ ಸೊಂಟ ಹಿಡಿದುಕೊಂಡಿರುವುದು ಕಂಡು ಬಂದಿತ್ತು.