ಪಾಕಿಸ್ತಾನ ಮೂಲದ ಕ್ರಿಪ್ಟೊ ವ್ಯಾಲೆಟ್‌ಗೆ 10 ಕೋಟಿ ರೂ. ವರ್ಗಾಯಿಸಲು ನೆರವು : ಗುಜರಾತ್ ನಿವಾಸಿ ಚೇತನ್ ಗಂಗಾನಿ ಬಂಧನ
ಸಾಂದರ್ಭಿಕ ಚಿತ್ರ
ಅಹ್ಮದಾಬಾದ್ : ಪಾಕಿಸ್ತಾನ ಮೂಲದ ಕ್ರಿಪ್ಟೊ ವ್ಯಾಲೆಟ್‌ಗೆ 10 ಕೋಟಿ ರೂ. ವರ್ಗಾಯಿಸಲು ನೆರವು ನೀಡಿದ ಆರೋಪದಲ್ಲಿ ಗುಜರಾತ್‌ನ ಸೂರತ್ ಜಿಲ್ಲೆಯ ನಿವಾಸಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯನ್ನು ಚೇತನ್ ಗಂಗಾನಿ ಎಂದು ಗುರುತಿಸಲಾಗಿದೆ. ಸೈಬರ್ ಅಪರಾಧದ ಮೂಲಕ ನಿಷ್ಕ್ರಿಯ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡುತ್ತಿದ್ದ ವಂಚಕರ ಕುರಿತು ನಡೆಯುತ್ತಿರುವ ತನಿಖೆಯ ಭಾಗವಾಗಿ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಗುಜರಾತ್ ಸಿಐಡಿ ಪೊಲೀಸ್ ವಿಭಾಗದ ಕ್ರೈಮ್ಸ್ ಸೈಬರ್ ಸೆಂಟರ್ ಫಾರ್ ಎಕ್ಸಲೆನ್ಸ್ ಪ್ರಕಟನೆಯಲ್ಲಿ ಹೇಳಿದೆ.
ಇದಲ್ಲದೆ ನಿಷ್ಕ್ರಿಯ ಖಾತೆಗಳನ್ನು ಬಳಸಿಕೊಂಡು ಸುಮಾರು 200 ಕೋಟಿ ರೂ. ಮೊತ್ತವನ್ನು ದುಬೈ ಮೂಲದ ಸೈಬರ್ ಅಪರಾಧಿಗಳಿಗೆ ವರ್ಗಾಯಿಸಿದ ಆರೋಪದಲ್ಲಿ ಮೊರ್ಬಿ, ಸುರೇಂದ್ರನಗರ, ಸೂರತ್ ಹಾಗೂ ಅಮ್ರೇಲಿಯದ ಆರು ಮಂದಿಯನ್ನು ನವೆಂಬರ್ 3ರಂದು ಬಂಧಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.