1.6 ಕೋ.ರೂ. ಮೌಲ್ಯದ 1.2 ಕಿಲೋ.ಗ್ರಾಂ. ಚಿನ್ನ ಕಳ್ಳ ಸಾಗಾಟ : ಮುಂಬೈ ವಿಮಾನ ನಿಲ್ದಾಣದ ಇಬ್ಬರು ಸಿಬ್ಬಂದಿ ಬಂಧನ
ಸಾಂದರ್ಭಿಕ ಚಿತ್ರ
ಮುಂಬೈ, ಅ. 19: 1.6 ಕೋ. ರೂ. ಮೌಲ್ಯದ ವಿದೇಶಿ ಮೂಲದ 1.2 ಕಿ.ಗ್ರಾಂ. ಚಿನ್ನವನ್ನು ಅಕ್ರಮ ಸಾಗಾಟ ಮಾಡಲು ಪ್ರಯತ್ನಿಸಿದ ಆರೋಪದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಮುಂಬೈ ವಿಮಾನ ನಿಲ್ದಾಣದ ಇಬ್ಬರು ಸ್ವಚ್ಛತಾ ಸಿಬ್ಬಂದಿಯನ್ನು ಬಂಧಿಸಿದ್ದಾರೆ.
ಚಿನ್ನ ಕಳ್ಳ ಸಾಗಾಟದ ಗುಂಪು ವಿಮಾನದಲ್ಲಿ ಚಿನ್ನವನ್ನು ಅಡಗಿಸಿ ಇಡಲು ವಿದೇಶದಿಂದ ಆಗಮಿಸುವ ಪ್ರಯಾಣಿಕರನ್ನು ಬಳಸುತ್ತದೆ. ಅನಂತರ ಈ ತಂತ್ರದ ಬಗ್ಗೆ ತಿಳಿದ ಅಥವಾ ನಿರ್ಬಂಧಿತ ಪ್ರದೇಶ ಪ್ರವೇಶಿಸಲು ಅನುಮತಿ ಹೊಂದಿದ ವಿಮಾನ ನಿಲ್ದಾಣದ ಸಿಬ್ಬಂದಿ ಅದನ್ನು ರಹಸ್ಯವಾಗಿ ಹೊರಗೆ ತೆಗೆಯುತ್ತಾರೆ ಎಂಬುದನ್ನು ತನಿಖೆ ಸೂಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರು ಆರೋಪಿಗಳಾದ ವಿಮಾನ ನಿಲ್ದಾಣದ ಸೇವಾ ಕಂಪೆನಿಯ ಉದ್ಯೋಗಿಗಳನ್ನು ಶನಿವಾರ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ವಿದೇಶಿ ಮೂಲದ ಚಿನ್ನವನ್ನು ವಿಮಾನದೊಳಗೆ ಬಚ್ಚಿಟ್ಟು ತರಲಾಗುತ್ತಿದೆ. ಅನಂತರ ವಿಮಾನ ನಿಲ್ದಾಣದ ಸಿಬ್ಬಂದಿ ಮೂಲಕ ಪಡೆಯಲಾಗುತ್ತಿದೆ ಎಂಬ ನಿರ್ದಿಷ್ಟ ಮಾಹಿತಿಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಹೊಂದಿತ್ತು. ಆದುದರಿಂದ ವಿಮಾನ ನಿಲ್ದಾಣದಲ್ಲಿ ನಿಗಾ ವಹಿಸಲಾಯಿತು.
ಸ್ವಚ್ಛತಾ ಸಿಬ್ಬಂದಿಯ ತಂಡದ ನಾಯಕ ಲಗುಬಗೆಯಿಂದ ಪೊಟ್ಟಣವನ್ನು ಏರೋಬ್ರಿಜ್ ಸ್ಟೈರ್‌ಕೇಸ್ ಮೇಲೆ ಇರಿಸಿರುವುದನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಗಮನಿಸಿದರು. ನಂತರ ಪೊಟ್ಟಣವನ್ನು ವಶಪಡಿಸಿಕೊಂಡಾಗ, ಬಿಳಿ ಬಟ್ಟೆಯೊಳಗೆ ಮೇಣದ ರೂಪದಲ್ಲಿ ಚಿನ್ನದ ಹುಡಿ ಇರುವುದು ಪತ್ತೆಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರು ಸಿಬ್ಬಂದಿಯನ್ನು ಕೂಡಲೇ ವಶಕ್ಕೆ ತೆಗೆದುಕೊಳ್ಳಲಾಯಿತು. ವಿಚಾರಣೆ ಸಂದರ್ಭ ಪತ್ತೆಯಾಗುವುದನ್ನು ತಪ್ಪಿಸಲು ಪೊಟ್ಟಣವನ್ನು ಅಡಗಿಸಿ ಇರಿಸಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.