×
Ad

ಉತ್ತರ ಪ್ರದೇಶ ಆಸ್ಪತ್ರೆಯಲ್ಲಿ ರಕ್ತ ಪೂರಣ: 14 ಮಕ್ಕಳಿಗೆ ಕಾಮಾಲೆ ಮತ್ತು ಎಚ್‍ಐವಿ ಸೋಂಕು

Update: 2023-10-24 19:39 IST

ಸಾಂದರ್ಭಿಕ ಚಿತ್ರ

ಕಾನ್ಪುರ: ಕಳವಳಕಾರಿ ಘಟನೆಯೊಂದರಲ್ಲಿ ಉತ್ತರ ಪ್ರದೇಶದ ಕಾನ್ಪುರದಲ್ಲಿನ ಸರ್ಕಾರಿ ಲಾಲಾ ಲಜಪತ್ ರಾಯ್ ಆಸ್ಪತ್ರೆಯಲ್ಲಿ ತಲೆಸೆಮಿಯ ರೋಗದ ಕಾರಣಕ್ಕೆ ರಕ್ತಪೂರಣಕ್ಕೆ ಒಳಗಾಗಿರುವ 14 ಮಕ್ಕಳು ಕಾಮಾಲೆ (ಹೆಪಾಟೈಟಿಸ್ ಬಿ/ಹೆಪಾಟೈಟಿಸ್ ಸಿ) ಹಾಗೂ ಎಚ್‍ಐವಿ ಸೋಂಕಿಗೆ ತುತ್ತಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆಯಿಂದ ಈಗಾಗಲೇ ತಲೆಸೆಮಿಯಾದಿಂದ ಬಳಲುತ್ತಿರುವ ಅಪ್ರಾಪ್ತ ಮಕ್ಕಳ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿರುವುದರಿಂದ ವೈದ್ಯಕೀಯ ವೃತ್ತಿಪರರನ್ನು ಆತಂಕಕ್ಕೆ ದೂಡಿದೆ.

ಈ ಪರಿಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿರುವ ಲಾಲಾ ಲಜಪತ್ ರಾಯ್ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಹಾಗೂ ಕೇಂದ್ರದ ನೋಡಲ್ ಅಧಿಕಾರಿ ಡಾ. ಅರುಣ್ ಆರ್ಯ, ಮಕ್ಕಳಿಗೆ ಮಾಡಲಾಗಿರುವ ರಕ್ತಪೂರಣದಿಂದ ಅನುವಂಶೀಯ ಸಮಸ್ಯೆಗಳೂ ತಲೆದೋರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಈ ಸೋಂಕಿಗೆ ರಕ್ತದಾನಿಗಳ ರಕ್ತವನ್ನು ಸದರಿ ವೈರಸ್ ಗಳಿಗೆ ಸಮರ್ಪಕವಾಗಿ ತಪಾಸಣೆ ಮಾಡದಿರುವುದು ಕಾರಣವಿರಬಹುದು ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ.

ಸದ್ಯ, ಈ ಕೇಂದ್ರದಲ್ಲಿ 180 ತಲೆಸೆಮಿಯ ರೋಗಿಗಳು ರಕ್ತಪೂರಣಕ್ಕೆ ಒಳಗಾಗಿದ್ದು, ಪ್ರತಿ ರೋಗಿಯನ್ನೂ ಪ್ರತಿ ಆರು ತಿಂಗಳಿಗೊಮ್ಮೆ ವೈರಸ್ ಸೋಂಕಿಗಾಗಿ ಪರೀಕ್ಷಿಸಲಾಗುತ್ತಿದೆ. ತೊಂದರೆಗೊಳಗಾಗಿರುವ 14 ಮಕ್ಕಳು ಖಾಸಗಿ ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ರಕ್ತಪೂರಣಕ್ಕೆ ಒಳಗಾಗಿದ್ದು, ಕೆಲವು ಪ್ರಕರಣಗಳಲ್ಲಿ ತುರ್ತು ವೈದ್ಯಕೀಯ ನೆರವು ಅಗತ್ಯವಿದ್ದಾಗ ಸ್ಥಳೀಯವಾಗಿಯೂ ರಕ್ತಪೂರಣಕ್ಕೆ ಒಳಗಾಗಿದ್ದಾರೆ.

ರಕ್ತಪೂರಣ ಪ್ರಕ್ರಿಯೆಯು ‘ವಿಂಡೊ ಅವಧಿ’(ಪ್ರಮಾಣೀಕೃತ ಪರೀಕ್ಷೆಯ ಅವಧಿಯಲ್ಲಿ ವೈರಸ್ ಪತ್ತೆಯಾಗದೆ ನಂತರ ಸೋಂಕಿಗೆ ತುತ್ತಾಗುವ ಅವಧಿ)ಯಲ್ಲಿ ನಡೆದಿರಬಹುದು ಎಂದು ಶಂಕಿಸಿರುವ ಡಾ. ಆರ್ಯ, ವೈದ್ಯರು ಮಕ್ಕಳನ್ನು ರಕ್ತಪೂರಣಕ್ಕೆ ಒಳಪಡಿಸುವುದಕ್ಕೂ ಮುನ್ನ ಅವರಿಗೆ ಹೆಪಾಟೈಟಿಸ್ ಬಿ ಲಸಿಕೆಯನ್ನು ನೀಡಬಹುದಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸೋಂಕಿಗೆ ತುತ್ತಾಗಿರುವ ಮಕ್ಕಳ ಪೈಕಿ ಏಳು ಮಕ್ಕಳು ಹೆಪಾಟೈಟಿಸ್ ಬಿ, ಐವರು ಹೆಪಾಟೈಟಿಸ್ ಸಿ ಹಾಗೂ ಇಬ್ಬರು ಎಚ್‍ಐವಿ ಸೋಂಕಿಗೆ ತುತ್ತಾಗಿದ್ದಾರೆ. ಈ ಮಕ್ಕಳು 6ರಿಂದ 16 ವರ್ಷ ವಯೋಮಾನದವರಾಗಿದ್ದಾರೆ. ಇವರೆಲ್ಲ ಕಾನ್ಪುರ ನಗರ, ದೆಹಾತ್, ಫರೂಖಾಬಾದ್, ಔರಯ್ಯ, ಇಟಾವಾ ಹಾಗೂ ಕನೌಜ್ ಸೇರಿದಂತೆ ಉತ್ತರ ಪ್ರದೇಶದ ವಿವಿಧ ಭಾಗಗಳಿಗೆ ಸೇರಿದವರಾಗಿದ್ದಾರೆ.

ವೈರಲ್ ಹೆಪಾಟೈಟಿಸ್ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸೋಂಕಿನ ಮೂಲದ ಕುರಿತು ತನಿಖೆ ನಡೆಸುತ್ತಿದ್ದಾರೆ. ಈ ತಂಡಕ್ಕೆ ಹೆಪಾಟೈಟಿಸ್ ಹಾಗೂ ಎಚ್‍ಐವಿ ಸೋಂಕಿನ ಮೂಲದ ಪತ್ತೆ ಹಾಗೂ ಈ ಕಳವಳಕಾರಿ ಘಟನೆಯನ್ನು ಸುತ್ತುವರಿದಿರುವ ಪರಿಸ್ಥಿತಿಗಳ ಕುರಿತು ಸೂಕ್ತ ಪರಿಶೀಲನೆ ನಡೆಸುವ ಗುರಿಯನ್ನು ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News