ತೆಲಂಗಾಣ | ಗುಂಪು ಹತ್ಯೆಯಿಂದ ತಂದೆಯನ್ನು ರಕ್ಷಿಸುವ ವೇಳೆ ದುಷ್ಕರ್ಮಿಗಳ ದಾಳಿಗೆ ಬಲಿಯಾದ 16ರ ಹರೆಯದ ಅಲಿಯಾ ಬೇಗಂ
ಅಲಿಯಾ ಬೇಗಂ (Photo credit: muslimmirror.com)
ಹೈದರಾಬಾದ್: ಗುಂಪುಹತ್ಯೆಯಿಂದ ತಂದೆಯನ್ನು ರಕ್ಷಿಸುವ ವೇಳೆ 16ರ ಹರೆಯದ ಬಾಲಕಿ ಅಲಿಯಾ ಬೇಗಂ ದುಷ್ಕರ್ಮಿಗಳ ಕಲ್ಲಿನ ದಾಳಿಗೆ ಪ್ರಾಣ ಕಳೆದುಕೊಂಡಿದ್ದಾಳೆ. ತೆಲಂಗಾಣದ ಜಹೀರಾಬಾದ್‌ನ ಅಂತರಾಮ್ ಗ್ರಾಮದಲ್ಲಿ ನಡೆದ ಘಟನೆ ನಡೆದಿದ್ದು, ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಏನಿದು ಘಟನೆ?
ಜಹೀರಾಬಾದ್‌ನ ಅಂತರಾಮ್ ಗ್ರಾಮದ ನಿವಾಸಿಯಾಗಿರುವ ಮುಹಮ್ಮದ್ ಇಸ್ಮಾಯಿಲ್ ಅವರು ವೀರಾ ರೆಡ್ಡಿ ಮತ್ತು ವಿಜಯ್ ರೆಡ್ಡಿ ಎಂಬವರ ಮನೆಯ ಸಮೀಪ ಮೂತ್ರ ವಿಸರ್ಜನೆ ಮಾಡುತ್ತಿದ್ದರು ಎನ್ನಲಾಗಿದೆ. ಇದೇ ವಿಚಾರಕ್ಕೆ ಮುಹಮ್ಮದ್ ಇಸ್ಮಾಯಿಲ್ ಜೊತೆ ಜಗಳ ಪ್ರಾರಂಭಿಸಿದ ವೀರಾ ರೆಡ್ಡಿ ಮತ್ತು ವಿಜಯ್ ರೆಡ್ಡಿ ಇತರ 40 ಜನರ ಜೊತೆ ಸೇರಿ ಇಸ್ಮಾಯಿಲ್ ಮೇಲೆ ದಾಳಿ ನಡೆಸಿದ್ದಾರೆ. ತನ್ನ ತಂದೆಯ ಮೇಲೆ ದಾಳಿ ನಡೆಯುತ್ತಿರುವುದನ್ನು ನೋಡಿದ ಅಲಿಯಾ ಅವರನ್ನು ರಕ್ಷಿಸಲು ಮಧ್ಯಪ್ರವೇಶಿಸಿದ್ದಾಳೆ. ಈ ವೇಳೆ ಆಕೆಯ ಮೇಲೂ ಕಲ್ಲಿನಿಂದ ದಾಳಿ ಮಾಡಲಾಗಿದೆ. ಕಲ್ಲೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಅಲಿಯಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ ಅಲಿಯಾ ಫೆಬ್ರವರಿ 15ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಆರಂಭದಲ್ಲಿ ಬಾಲಕಿಯ ಪೋಷಕರು ಯಾವುದೇ ದೂರು ನೀಡಿರಲಿಲ್ಲ. ವಕೀಲರಾದ ಅಫ್ಸರ್ ಜಹಾನ್, ಸುಜಾತ್ ಅವರು ಎಸ್ಪಿಯನ್ನು ಭೇಟಿ ಮಾಡಿ ಈ ಬಗ್ಗೆ ಮಾಹಿತಿ ನೀಡಿದ ಬಳಿಕ ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೇಳಲಾಗಿದೆ.
ಪೊಲೀಸರು ಹೇಳಿದ್ದೇನು?
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಡಿಎಸ್‌ಪಿ ಪಿ.ಸತ್ತಯ್ಯ, ಫೆಬ್ರವರಿ 11ರಂದು ಅಂತರಾಮ್ ಗ್ರಾಮದ ಮನೆಯೊಂದರ ಬಳಿ ಸಂತ್ರಸ್ತೆಯ ತಂದೆ ಮೂತ್ರ ಮಾಡಿದ ವಿಷಯಕ್ಕೆ ಸಂಬಂಧಿಸಿ ವಾಕ್ಸಮರ ನಡೆದು ವಿಜಯಾ ರೆಡ್ಡಿ ಮತ್ತು ವೀರಾರೆಡ್ಡಿ ಸಹೋದರರು ಬಾಲಕಿಯ ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಆಲಿಯಾ ತನ್ನ ತಂದೆಯನ್ನು ರಕ್ಷಿಸಲು ಮಧ್ಯಪ್ರವೇಶಿಸಿದ್ದು, ಆಕೆಯ ಮೇಲೆಯೂ ಕಲ್ಲು ತೂರಾಟ ನಡೆಸಲಾಗಿದೆ. ಕಲ್ಲಿನ ಏಟಿನಿಂದ ಗಂಭೀರವಾಗಿ ಗಾಯಗೊಂಡು ಅಲಿಯಾ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅಲಿಯಾ ಕ್ಯಾನ್ಸರ್‌ನಿಂದ ಕೂಡ ಬಳಲುತ್ತಿದ್ದಳು ಎಂಬುವುದು ತನಿಖೆಯ ಬಳಿಕ ಬಯಲಾಗಿದೆ. ಆಕೆಯ ಕುಟುಂಬವು ದಾಳಿಯ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಗೆ ತಿಳಿಸಿರಲಿಲ್ಲ. ಘಟನೆಯ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ :
ಘಟನೆಯು ಇಡೀ ಗ್ರಾಮದ ಜನರನ್ನು ದಿಗ್ಭ್ರಮೆಗೊಳಿಸಿದೆ, ಆರೋಪಿಗಳ ವಿರುದ್ಧ ಕಠಿಣ ಮತ್ತು ತಕ್ಷಣದ ಕ್ರಮಕ್ಕಾಗಿ ಹಲವರು ಒತ್ತಾಯಿಸಿದ್ದಾರೆ.
ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿದ ಶಾಸಕ ಕೌಸರ್ ಮೊಹಿಯುದ್ದೀನ್, ಈ ಕ್ರೂರ ದಾಳಿ ಕೇವಲ ಅಲಿಯಾ ಮತ್ತು ಆಕೆಯ ತಂದೆಯ ಮೇಲಿನ ದಾಳಿಯಲ್ಲ. ಇಡೀ ಸಮುದಾಯದ ಮೇಲಿನ ದಾಳಿಯಾಗಿದೆ ಎಂದು ಆರೋಪಿಸಿದರು.
ʼಮಜ್ಲಿಸ್ ಬಚಾವೋ ತೆಹ್ರೀಕ್ ಅಮ್ಜದುಲ್ಲಾ ಖಾನ್ ಈ ಕುರಿತು ಪ್ರತಿಕ್ರಿಯಿಸಿ, ಈ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗಬೇಕು. ಎಲ್ಲಾ ಆರೋಪಿಗಳನ್ನು ಬಂಧಿಸಬೇಕು. ಸಂತ್ರಸ್ತೆಯ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಮತ್ತು ಸರಕಾರಿ ಉದ್ಯೋಗವನ್ನು ನೀಡಬೇಕು. ಇಂದಿರಮ್ಮ ವಸತಿ ಯೋಜನೆಯಡಿ ವಸತಿ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ .