×
Ad

162 ವಿದೇಶ ಪ್ರಯಾಣಗಳು, 300 ಕೋಟಿ ರೂ.ಹಗರಣ: ವೆಸ್ಟ್ಆರ್ಕ್ಟಿಕಾದ ನಕಲಿ ರಾಯಭಾರ ಕಚೇರಿಯ ತನಿಖೆಯಲ್ಲಿ ಬಹಿರಂಗ

Update: 2025-07-27 17:00 IST

PC : NDTV 

ಹೊಸದಿಲ್ಲಿ,ಜು.27: ಎಂಟು ವರ್ಷಗಳ ಕಾಲ ಉತ್ತರ ಪ್ರದೇಶದ ಘಾಝಿಯಾಬಾದ್‌ ನಲ್ಲಿ ನಕಲಿ ರಾಯಭಾರ ಕಚೇರಿಯನ್ನು ನಡೆಸಿ ಕೊನೆಗೂ ಪೋಲಿಸರ ಬಲೆಗೆ ಬಿದ್ದಿರುವ ಹರ್ಷವರ್ಧನ್ ಜೈನ್ ಪ್ರಕರಣದಲ್ಲಿ ತನಿಖೆಯು ಸುಮಾರು 300 ಕೋಟಿ ರೂ.ಗಳ ಹಗರಣದೊಂದಿಗೆ ಸಂಭಾವ್ಯ ಸಂಪರ್ಕ,10 ವರ್ಷಗಳಲ್ಲಿ 162 ವಿದೇಶ ಪ್ರಯಾಣಗಳು ಮತ್ತು ಹಲವಾರು ಸಾಗರೋತ್ತರ ಬ್ಯಾಂಕ್ ಖಾತೆಗಳು ಸೇರಿದಂತೆ ಆಘಾತಕಾರಿ ವಿವರಗಳನ್ನು ಬಹಿರಂಗಗೊಳಿಸಿದೆ.

ಕಳೆದ ವಾರ ಘಾಝಿಯಾಬಾದ್‌ ನಲ್ಲಿಯ ಎರಡಂತಸ್ತಿನ ಬಾಡಿಗೆ ಮನೆಯಿಂದ ಜೈನ್ ನನ್ನು ಬಂಧಿಸಲಾಗಿದ್ದು, ಅದನ್ನು ವೆಸ್ಟ್ಆರ್ಕ್ಟಿಕಾದ ರಾಯಭಾರ ಕಚೇರಿ ಎಂದು ಆತ ಹೇಳಿಕೊಂಡಿದ್ದ. ಉತ್ತರ ಪ್ರದೇಶ ಪೋಲಿಸ್ ನ ವಿಶೇಷ ಕಾರ್ಯಪಡೆಯು ನಡೆಸಿರುವ ತನಿಖೆಯಲ್ಲಿ ಜೈನ್ ಉದ್ಯೋಗದ ಆಮಿಷವೊಡ್ಡುವ ಜಾಲವನ್ನು ನಡೆಸುತ್ತಿದ್ದ ಮತ್ತು ಹವಾಲಾ ಮೂಲಕ ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದ ಎನ್ನುವುದು ಬೆಳಕಿಗೆ ಬಂದಿದೆ.

ಘಾಝಿಯಾಬಾದ್‌ ನಲ್ಲಿ ನಡೆಸಿದ ದಾಳಿ ವೇಳೆ ಪೋಲಿಸರು ನಕಲಿ ರಾಜತಾಂತ್ರಿಕ ನಂಬರ್ ಪ್ಲೇಟ್ ಗಳನ್ನು ಹೊಂದಿದ್ದ ನಾಲ್ಕು ಕಾರುಗಳು,ನಕಲಿ ದಾಖಲೆಗಳು ಮತ್ತು ಐಷಾರಾಮಿ ಗಡಿಯಾರಗಳ ಸಂಗ್ರಹವನ್ನು ವಶಪಡಿಸಿಕೊಂಡಿದ್ದರು. ಪೋಲಿಸರು ಸೋಮವಾರ ನ್ಯಾಯಾಲಯದಲ್ಲಿ ಜೈನ್ ನನ್ನು ತಮ್ಮ ವಶಕ್ಕೆ ನೀಡುವಂತೆ ಕೋರಲಿದ್ದಾರೆ. ಜೈನ್ ಸುಮಾರು 300 ಕೋಟಿ ರೂ.ಗಳ ಹಗರಣದಲ್ಲಿ ಭಾಗಿಯಾಗಿರಬಹುದು ಎಂದು ಪೋಲಿಸರು ತಿಳಿಸಿದರು.

ಘಾಝಿಯಾಬಾದ್‌ ನ ಭವ್ಯವಾದ ಎರಡಂತಸ್ತಿನ ಮನೆಗೆ ‘ಗ್ರ್ಯಾಂಡ್ ಡಚಿ ಆಫ್ ವೆಸ್ಟ್ಆರ್ಕ್ಟಿಕಾ’ ಮತ್ತು ‘ಎಚ್.ಇ.ಎಚ್ವಿ ಜೈನ್, ಆನರರಿ ಕಾನ್ಸುಲ್’ ಎಂಬ ನಾಮಫಲಕಗಳನ್ನು ಅಳವಡಿಸಲಾಗಿತ್ತು. ಆವರಣದಲ್ಲಿ ಭಾರತ ಮತ್ತು ವೆಸ್ಟ್ಆರ್ಕ್ಟಿಕಾಗಳ ಧ್ವಜಗಳು ಹಾರಾಡುತ್ತಿದ್ದವು. ವೆಸ್ಟ್ಆರ್ಕ್ಟಿಕಾ ಸ್ವಯಂಘೋಷಿತ ಸಣ್ಣ ರಾಜ್ಯವಾಗಿದ್ದು, ಜಗತ್ತಿನ ಯಾವುದೇ ಸಾರ್ವಭೌಮ ದೇಶದಿಂದ ಮಾನ್ಯತೆಯನ್ನು ಪಡೆದಿಲ್ಲ.

ತನಿಖಾಧಿಕಾರಿಗಳ ಪ್ರಕಾರ ಜೈನ್ ಇದನ್ನು ತನ್ನ ನೆಟ್ವರ್ಕಿಂಗ್ ನ ಮುಖವಾಡವಾಗಿ ಬಳಸುತ್ತಿದ್ದ ಮತ್ತು ಜನರಿಗೆ ವಿದೇಶಗಳಲ್ಲಿ ಉದ್ಯೋಗಗಳ ಆಮಿಷವೊಡ್ಡುತ್ತಿದ್ದ. ಈ ನಕಲಿ ರಾಯಭಾರ ಕಚೇರಿ 2017ರಿಂದಲೂ ಅಸ್ತಿತ್ವದಲ್ಲಿದ್ದು, ತನ್ನ ಕಪಟ ಜಾಲವನ್ನು ಮಂದುವರಿಸಲು ಜೈನ್ ಆವರಣದಲ್ಲಿ ಸಮುದಾಯ ಭೋಜನಗಳು ಸೇರಿದಂತೆ ದತ್ತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದ.

ದಾಳಿಯ ಸಂದರ್ಭದಲ್ಲಿ ಜೈನ್ ವಿವಾದಾತ್ಮಕ ‘ದೇವಮಾನವ’ ಚಂದ್ರಸ್ವಾಮಿ ಮತ್ತು ಸೌದಿ ಅರೇಬಿಯದ ಶಸ್ತ್ರಾಸ್ತ್ರ ವ್ಯಾಪಾರಿ ಅದ್ನಾನ್ ಖಶೋಗಿ ಜೊತೆಯಲ್ಲಿದ್ದ ಫೋಟೋಗಳನ್ನೂ ಪೋಲಿಸರು ಪತ್ತೆ ಹಚ್ಚಿದ್ದಾರೆ.

ಚಂದ್ರಸ್ವಾಮಿ ಜೈನ್ ನನ್ನು ಖಸ್ಸೋಗಿ ಮತ್ತು ವಂಚಕ ಅಹ್ಸಾನ್ ಅಲಿ ಸೈಯದ್‌ ಗೆ ಪರಿಚಯಿಸಿದ್ದರು. ಸೈಯದ್ ಜೈನ್ ಜೊತೆ ಸೇರಿಕೊಂಡು 25 ಶೆಲ್ ಕಂಪೆನಿಗಳನ್ನು ಆರಂಭಿಸಿದ್ದ ಮತ್ತು ಅಕ್ರಮ ಹಣ ವರ್ಗಾವಣೆಗೆ ಇವುಗಳನ್ನು ಬಳಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಹೈದರಾಬಾದ್‌ ನಲ್ಲಿ ಜನಿಸಿದ್ದ ಸೈಯದ್ ಬಳಿಕ ತುರ್ಕಿಯದ ಪ್ರಜೆಯಾಗಿದ್ದ.

ಸೈಯದ್ ಸ್ವಿಟ್ಝರ್ಲ್ಯಾಂಡ್ ನಲ್ಲಿ ನಡೆಸುತ್ತಿದ್ದ ವೆಸ್ಟರ್ನ್ ಅಡ್ವೈಸರಿ ಗ್ರೂಪ್ ಕಂಪೆನಿಗಳೊಂದಿಗೆ ಸಂಪರ್ಕ ಸಾಧಿಸಿ ಕಮಿಷನ್‌ ಗೆ ಪ್ರತಿಯಾಗಿ ಸಾಲಗಳನ್ನು ಪಡೆಯಲು ನೆರವಾಗುವುದಾಗಿ ಭರವಸೆ ನೀಡುತ್ತಿತ್ತು. ಕಂಪೆನಿಯು ಸುಮಾರು 300 ಕೋಟಿ ರೂ.ಗಳ ಕಮಿಷನ್ ಸಂಗ್ರಹಿಸಿದ ಬಳಿಕ ಸ್ವಿಟ್ಝರ್ಲ್ಯಾಂಡ್‌ ನಿಂದ ಪರಾರಿಯಾಗಿತ್ತು. 2022ರಲ್ಲಿ ಲಂಡನ್ನಲ್ಲಿ ಸೈಯದ್‌ ನನ್ನು ಬಂಧಿಸಲಾಗಿತ್ತು. ಈ ಬೃಹತ್ ಹಗರಣದಲ್ಲಿ ಜೈನ್ ಎಷ್ಟರ ಮಟ್ಟಿಗೆ ಭಾಗಿಯಾಗಿದ್ದ ಎಂಬ ಬಗ್ಗೆ ಪೋಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.

ಜೈನ್ ಬಂಧನದ ಬಳಿಕ ಆತನಿಂದ ಅಂತರವನ್ನು ಕಾಯ್ದುಕೊಂಡಿರುವ ವೆಸ್ಟ್ಆರ್ಕ್ಟಿಕಾ, ಭಾರತದ ಕಾನೂನು ಪ್ರಾಧಿಕಾರಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ಹೇಳಿಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News