×
Ad

1993ರ ಮುಂಬೈ ಸರಣಿ ಸ್ಫೋಟ ಪ್ರಕರಣ: ಅವಧಿಪೂರ್ವ ಬಿಡುಗಡೆ ಕೋರಿದ್ದ ಅಬು ಸಲೇಂ ಅರ್ಜಿಗೆ ಸುಪ್ರೀಂ ಕೋರ್ಟ್ ತಿರಸ್ಕಾರ

Update: 2026-02-16 21:15 IST

 ಅಬು ಸಲೇಂ , ಸುಪ್ರೀಂ ಕೋರ್ಟ್ |  Photo Credit : PTI 

ಹೊಸದಿಲ್ಲಿ: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅವಧಿಪೂರ್ವ ಬಿಡುಗಡೆಯನ್ನು ಕೋರಿ ಗ್ಯಾಂಗ್‌ಸ್ಟರ್ ಅಬು ಸಲೇಂ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ತಿರಸ್ಕರಿಸಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

ನ್ಯಾಯಮೂರ್ತಿಗಳಾದ ವಿಕ್ರಮನಾಥ ಮತ್ತು ಸಂದೀಪ ಮೆಹ್ತಾ ಅವರ ಪೀಠವು ಪರಿಹಾರವನ್ನು ಕೋರಿ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಆತನಿಗೆ ಸೂಚಿಸಿತು.

ತುರ್ತು ನಿರ್ದೇಶನಗಳಿಗಾಗಿ ಸಲೇಂ ಮನವಿಯನ್ನು ತಿರಸ್ಕರಿಸಿದ ಪೀಠವು,ಈಗ ರದ್ದುಗೊಂಡಿರುವ ಭಯೋತ್ಪಾದಕ ಮತ್ತು ವಿಧ್ವಂಸಕ ಚಟುವಟಿಕೆಗಳ ತಡೆ ಕಾಯ್ದೆ (ಟಾಡಾ) ಮತ್ತು ಕ್ರಿಮಿನಲ್ ದಾಖಲೆಯಡಿ ಆತನಿಗೆ ವಿಧಿಸಲಾಗಿರುವ ಶಿಕ್ಷೆಯು ವಿಶೇಷ ಪರಿಗಣನೆಯನ್ನು ಸಮರ್ಥಿಸುವುದಿಲ್ಲ ಎಂದು ಹೇಳಿತು.

ಸೆ.2017ರಲ್ಲಿ ಮುಂಬೈನ ವಿಶೇಷ ಟಾಡಾ ನ್ಯಾಯಾಲಯವು 250ಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡಿದ್ದ ಸ್ಫೋಟಗಳಲ್ಲಿ ಆತನ ಪಾತ್ರಕ್ಕಾಗಿ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.

ನ.2005ರಲ್ಲಿ ಸಲೇಮ್‌ನನ್ನು ಪೋರ್ಚುಗಲ್‌ನಿಂದ ಗಡಿಪಾರು ಮಾಡಲಾಗಿತ್ತು.

ಸಲೇಂ ತನ್ನ 25 ವರ್ಷಗಳ ಜೈಲು ಶಿಕ್ಷೆಯ ಲೆಕ್ಕಾಚಾರದಲ್ಲಿ ಉತ್ತಮ ನಡವಳಿಕೆಗಾಗಿ ಗಳಿಸಿದ ಮೂರು ವರ್ಷ ಮತ್ತು 16 ದಿನಗಳ ಶಿಕ್ಷಾ ಅವಧಿ ಕಡಿತದ ಲಾಭವನ್ನು ಕೋರಿ ಅರ್ಜಿಯನ್ನು ಸಲ್ಲಿಸಿದ್ದ.

ಭಾರತ ಮತ್ತು ಪೋರ್ಚುಗಲ್ ನಡುವಿನ ಹಸ್ತಾಂತರ ಒಪ್ಪಂದದ ಆಧಾರದಲ್ಲಿ ಸರ್ವೋಚ್ಚ ನ್ಯಾಯಾಲಯದ ಜು.2022ರ ತೀರ್ಪನ್ನೂ ಸಲೇಂ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ. ಈ ಒಪ್ಪಂದದ ಷರತ್ತುಗಳ ಪ್ರಕಾರ ಸಲೇಂ 25 ವರ್ಷಗಳ ಜೈಲು ಶಿಕ್ಷೆಯನ್ನು ಪೂರೈಸಿದ ಬಳಿಕ ಆತನನ್ನು ಬಿಡುಗಡೆಗೊಳಿಸಬೇಕು.

ಆದರೆ,ಸಲೇಂ 25 ವರ್ಷಗಳ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿಲ್ಲ ಎಂದು ಮಹಾರಾಷ್ಟ್ರ ಸರಕಾರವು ವಾದಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News