×
Ad

ಉತ್ತರ ಪ್ರದೇಶ | ಮೊಸಳೆಯಿಂದ ಪತಿಯನ್ನು ರಕ್ಷಿಸಿದ ಪತ್ನಿ

Update: 2025-08-20 19:37 IST

  ಸಾಂದರ್ಭಿಕ ಚಿತ್ರ

ಬಹ್ರೈಚ್: ತಾಯಿಯೊಬ್ಬಳು ತನ್ನ ಜೀವವನ್ನೇ ಪಣಕ್ಕಿಟ್ಟು, ತನ್ನ ಐದು ವರ್ಷದ ಮಗುವನ್ನು ಮೊಸಳೆಯಿಂದ ರಕ್ಷಿಸಿದ ಘಟನೆಯ ಬೆನ್ನಿಗೇ, ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ತನ್ನ ಪತಿಯನ್ನು ಮಹಿಳೆಯೊಬ್ಬಳು ರಕ್ಷಿಸಿರುವ ಘಟನೆ ಬಹ್ರೈಚ್ ಜಿಲ್ಲೆಯಿಂದಲೇ ವರದಿಯಾಗಿದೆ.

ಮೊದಲನೆ ಘಟನೆಯು ರವಿವಾರ ಖೈರಿಘಾಟ್ ಪ್ರದೇಶದ ಧಾಕಿಯಾ ಗ್ರಾಮದಲ್ಲಿ ನಡೆದಿತ್ತು. ಈ ಘಟನೆಯಲ್ಲಿ ಏಳು ಅಡಿ ಉದ್ದದ ಮೊಸಳೆಯು ಘಾಘ್ರಾ ನದಿಗೆ ಸಂಪರ್ಕ ಹೊಂದಿರುವ ಕಾಲುವೆಯಲ್ಲಿ ವೀರು ಎಂಬ ಬಾಲಕನನ್ನು ಸೆಳೆದುಕೊಂಡಿತ್ತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದ ಬಾಲಕನ ತಾಯಿ, ಆತನನ್ನು ಮೊಸಳೆಯ ಹಿಡಿತದಿಂದ ವೀರೋಚಿತವಾಗಿ ಬಿಡಿಸುವಲ್ಲಿ ಯಶಸ್ವಿಯಾಗಿದ್ದಳು.

ಮತ್ತೊಂದು ಪ್ರತ್ಯೇಕ ಘಟನೆ ಕೂಡಾ ಬಹ್ರೈಚ್ ಜಿಲ್ಲೆಯ ಮೋತಿಪುರ್ ಪ್ರದೇಶದ ಮಹಾದೇವಪುರ್ ಗ್ರಾಮದಲ್ಲಿ ನಡೆದಿದ್ದು, ಈ ಘಟನೆಯಲ್ಲಿ 45 ವರ್ಷದ ಸೈಫು ಎಂಬ ವ್ಯಕ್ತಿಯು ತನ್ನ ಪತ್ನಿ ಸುರ್ಜಾನಾ ಹಾಗೂ ನಾದಿನಿಯೊಂದಿಗೆ ರಾಮ್ ತಾಲಿಯ ನಾಲೆಯನ್ನು ದಾಟುವಾಗ, ಸೈಫು ಕಡೆ ಹಾರಿರುವ ಮೊಸಳೆಯೊಂದು, ಅವರ ಕಾಲನ್ನು ಕಡಿದಿದೆ.

ಸೈಫು ಸಹಾಯಕ್ಕಾಗಿ ಮೊರೆ ಇಡುತ್ತಿದ್ದಂತೆಯೇ, ಆತನ ಪತ್ನಿ ಸುರ್ಜಾನಾ ಆತನನ್ನು ಹಿಡಿದಿದ್ದ ಮೊಸಳೆಯತ್ತ ತನ್ನ ಸೀರೆ ಇಳಿ ಬಿಟ್ಟಿದ್ದಾರೆ. ಕೂಡಲೇ ಸೈಫು ಆ ಸೀರೆಯನ್ನು ಹಿಡಿದುಕೊಂಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳದತ್ತ ದೌಡಾಯಿಸಿರುವ ಗ್ರಾಮಸ್ಥರು, ಮೊಸಳೆ ಸೈಫುವನ್ನು ಬಿಡುವವರೆಗೂ ಅದನ್ನು ದೊಣ್ಣೆಗಳಿಂದ ಥಳಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿದ್ದ ಸೈಫುಗೆ ಮೊದಲು ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಿದ ನಂತರ, ಬಹ್ರೈಚ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ. ಅಲ್ಲಿನ ವೈದ್ಯರು ಸೈಫು ಆರೋಗ್ಯ ಸ್ಥಿತಿಯ ಮೇಲೆ ನಿಗಾ ವಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಕಟರ್ನಿಯಾಘಾಟ್ ವನ್ಯಜೀವಿ ವಲಯದ ಅರಣ್ಯಾಧಿಕಾರಿಗಳು, ಭಾರಿ ಮಳೆಯಿಂದಾಗಿ ನದಿ ಹಾಗೂ ನಾಲೆಗಳಲ್ಲಿನ ನೀರಿನ ಮಟ್ಟದಲ್ಲಿ ಏರಿಕೆಯಾಗಿರುವುದರಿಂದ, ಮೊಸಳೆಗಳು ಜನವಸತಿ ಪ್ರದೇಶಗಳತ್ತ ಬರುತ್ತಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಸ್ಥಳದಲ್ಲಿ ತಂಡಗಳನ್ನು ನಿಯೋಜಿಸಲಾಗಿದ್ದು, ಮೊಸಳೆಗಳ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ನದಿಗಳು ಹಾಗೂ ನಾಲೆಗಳ ಬಳಿ ತೆರಳದಂತೆ ಜನರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News