ಮ್ಯಾನ್ಮಾರ್ ನಿಂದ ಥೈಲ್ಯಾಂಡ್ ಗೆ ಪರಾರಿಯಾಗಿದ್ದ 270 ಭಾರತೀಯರು ತಾಯ್ನಾಡಿಗೆ ವಾಪಸ್
ಸಾಂದರ್ಭಿಕ ಚಿತ್ರ | Photo Credit : X
ಹೊಸದಿಲ್ಲಿ,ನ.5: ಮ್ಯಾನ್ಮಾರ್ ನ ಕುಖ್ಯಾತ ಸೈಬರ್ ವಂಚನೆ ಕೇಂದ್ರದ ಮೇಲೆ ದಾಳಿಯ ಬಳಿಕ ಅಲ್ಲಿಂದ ಥೈಲ್ಯಾಂಡ್ ನ ಗಡಿ ಪಟ್ಟಣ ಮೇ ಸಾಟ್ ಗೆ ಪರಾರಿಯಾಗಿದ್ದ ತನ್ನ 270 ಪ್ರಜೆಗಳನ್ನು ಭಾರತವು ಗುರುವಾರ ಎರಡು ಮಿಲಿಟರಿ ಸಾರಿಗೆ ವಿಮಾನಗಳಲ್ಲಿ ತಾಯ್ನಾಡಿಗೆ ಮರಳಿ ಕರೆಸಿಕೊಂಡಿದೆ.
ಕಳೆದ ತಿಂಗಳ ಉತ್ತರಾರ್ಧದಲ್ಲಿ ಮ್ಯಾನ್ಮಾರ್ ನ ಮಯವಾಡಿ ನಗರದಲ್ಲಿಯ ಸೈಬರ್ ಅಪರಾಧ ಕೇಂದ್ರ ಕೆಕೆ ಪಾರ್ಕ್ ಮೇಲೆ ದಾಳಿ ನಡೆದ ಬಳಿಕ ಅಲ್ಲಿ ಕೆಲಸ ಮಾಡುತ್ತಿದ್ದ 500 ಭಾರತೀಯರು ಸೇರಿದಂತೆ 28 ದೇಶಗಳ 1,500 ಜನರು ಥೈಲ್ಯಾಂಡ್ ಗಡಿ ದಾಟಿದ್ದರು.
ಭಾರತೀಯ ವಾಯುಪಡೆಯ ಎರಡು ವಿಶೇಷ ವಿಮಾನಗಳಲ್ಲಿ 26 ಮಹಿಳೆಯರು ಸೇರಿದಂತೆ 270 ಭಾರತೀಯರನ್ನು ಭಾರತಕ್ಕೆ ವಾಪಸ್ ಕಳುಹಿಸಲು ಥಾಯ್ ಸರಕಾರ ಸಹಕರಿಸಿದೆ ಎಂದು ಬ್ಯಾಂಕಾಕ್ ನಲ್ಲಿಯ ಭಾರತೀಯ ರಾಯಭಾರ ಕಚೇರಿಯು ತಿಳಿಸಿದೆ.
ಅಕ್ರಮವಾಗಿ ದೇಶವನ್ನು ಪ್ರವೇಶಿಸಿದ್ದಕ್ಕಾಗಿ ಥಾಯ್ ವಲಸೆ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಅಲ್ಲಿಯ ಅಧಿಕಾರಿಗಳು ಭಾರತೀಯರನ್ನು ವಶಕ್ಕೆ ತೆಗೆದುಕೊಂಡಿದ್ದರು ಎಂದೂ ಅದು ತಿಳಿಸಿದೆ.
ಉಳಿದ ಭಾರತೀಯರನ್ನು ಮರಳಿ ಕರೆತರಲು ಭಾರತವು ಶುಕ್ರವಾರ ಇನ್ನಷ್ಟು ಯಾನಗಳನ್ನು ನಿರ್ವಹಿಸುವ ನಿರೀಕ್ಷೆಯಿದೆ.