ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ : ಜೈಸ್ವಾಲ್ ಅಜೇಯ ಶತಕ, ಭಾರತಕ್ಕೆ ಭರ್ಜರಿ ಮೊತ್ತ
ಜೈಸ್ವಾಲ್ | Photo Credit : PTI
ಹೊಸದಿಲ್ಲಿ, ಅ. 10: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ದಿನವಾದ ಶುಕ್ರವಾರ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್‌ರ ಅಜೇಯ 173 ರನ್‌ಗಳ ನೆರವಿನಿಂದ ಭಾರತವು ತನ್ನ ಮೊದಲ ಇನಿಂಗ್ಸ್‌ನಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ 318 ರನ್‌ಗಳನ್ನು ಕಲೆ ಹಾಕಿದೆ.
ದಿಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಭಾರತೀಯ ತಂಡದ ನಾಯಕ ಶುಭಮನ್ ಗಿಲ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಮೊದಲ ದಿನದ ಆಟದಲ್ಲಿ ಜೈಸ್ವಾಲ್ ಸಂಪೂರ್ಣವಾಗಿ ಪ್ರಾಬಲ್ಯ ಮೆರೆದರು. ಅವರು ಸಾಯಿ ಸುದರ್ಶನ್ ಜೊತೆಗೆ ಎರಡನೇ ವಿಕೆಟ್‌ಗೆ 193 ರನ್‌ಗಳ ಭಾಗೀದಾರಿಕೆ ನಿಭಾಯಿಸಿದರು. ಸಾಯಿ ಸುದರ್ಶನ್ 87 ರನ್‌ಗಳನ್ನು ಗಳಿಸಿದರು.
ದಿನದಾಟ ಮುಗಿದಾಗ ಜೈಸ್ವಾಲ್ ಮತ್ತು ನಾಯಕ ಶುಭಮನ್ ಗಿಲ್ ಕ್ರೀಸ್‌ನಲ್ಲಿದ್ದರು. ಗಿಲ್ 20 ರನ್‌ಗಳನ್ನು ಗಳಿಸಿದ್ದಾರೆ. ಸುದರ್ಶನ್‌ರ ವಿಕೆಟ್ ಕೊನೆಯ ಅವಧಿಯ ಆಟದಲ್ಲಿ ಉರುಳಿದ ಏಕೈಕ ವಿಕೆಟ್ ಆಗಿತ್ತು.
23 ವರ್ಷದ ಜೈಸ್ವಾಲ್ ತನ್ನ 26ನೇ ಟೆಸ್ಟ್ ಪಂದ್ಯದಲ್ಲಿ ತನ್ನ ಏಳನೇ ಶತಕ ಬಾರಿಸಿದರು. ಅವರ ಟೆಸ್ಟ್ ಬದುಕು 2023ರಲ್ಲಿ ಆರಂಭಗೊಂಡಿತು. ಅವರು ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 171 ರನ್ ಗಳಿಸಿದ್ದರು.
ಜೇಡನ್ ಸೀಲ್ಸ್ ಎಸೆದ ಭೋಜನ ವಿರಾಮದ ಬಳಿಕದ ಮೊದಲ ಓವರ್‌ನಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಅವರು, ಮೂರು ಬೌಂಡರಿಗಳನ್ನು ಸಿಡಿಸಿ ಅರ್ಧ ಶತಕವನ್ನು ತಲುಪಿದರು.
ಸುದರ್ಶನ್, ಖಾರಿ ಪಿಯರ್ ಎಸೆತವನ್ನು ಬೌಂಡರಿಗಟ್ಟಿ ತನ್ನ ಅರ್ಧ ಶತಕವನ್ನು ಪೂರ್ಣಗೊಳಿಸಿದರು. ಅವರ ವೈಯಕ್ತಿಕ ಮೊತ್ತ 58ರಲ್ಲಿದ್ದಾಗ ಜೀವದಾನವೊಂದು ಲಭಿಸಿತು.
ಬಳಿಕ, ಜೈಸ್ವಾಲ್ ಮತ್ತು ಗಿಲ್ ಮುರಿಯದ ಮೂರನೇ ವಿಕೆಟ್‌ಗೆ 67 ರನ್‌ಗಳನ್ನು ಸೇರಿಸಿ ವೆಸ್ಟ್ ಇಂಡೀಸ್ ವಿರುದ್ಧದ ಒತ್ತಡವನ್ನು ಹೆಚ್ಚಿಸಿದರು.
ಆರಂಭಿಕರಾದ ಕೆ.ಎಲ್. ರಾಹುಲ್ ಮತ್ತು ಜೈಸ್ವಾಲ್ ಮೊದಲ ವಿಕೆಟ್‌ಗೆ 58 ರನ್‌ಗಳನ್ನು ಸೇರಿಸಿ ಉತ್ತಮ ಆರಂಭವನ್ನು ಒದಗಿಸಿದರು. ಕ್ಷಿಪ್ರವಾಗಿ 38 ರನ್‌ಗಳನ್ನು ಗಳಿಸಿದ ರಾಹುಲ್‌ರನ್ನು ವಾರಿಕನ್ ಎಸೆತದಲ್ಲಿ ವಿಕೆಟ್‌ಕೀಪರ್ ಟೆವಿನ್ ಇಮ್ಲಾಕ್ ಸ್ಟಂಪ್ಡ್ ಮಾಡಿದರು.
ಮೊದಲ ಟೆಸ್ಟ್‌ನಲ್ಲಿ ಆಡಿದ್ದ ತಂಡವನ್ನೇ ಭಾರತವು ಎರಡನೇ ಟೆಸ್ಟ್‌ಗೂ ಇಳಿಸಿದೆ. ಮೊದಲ ಟೆಸ್ಟನ್ನು ಭಾರತವು ಇನಿಂಗ್ಸ್ ಅಂತರದಿಂದ ಗೆದ್ದಿದೆ.
► 7ನೇ ಟೆಸ್ಟ್ ಶತಕ : ಇತಿಹಾಸ ನಿರ್ಮಿಸಿದ ಜೈಸ್ವಾಲ್
ಹೊಸದಿಲ್ಲಿಯಲ್ಲಿ ಶುಕ್ರವಾರ ಆರಂಭಗೊಂಡಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್‌ನ ಮೊದಲ ದಿನದಂದು ಭಾರತದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ತನ್ನ ಏಳನೇ ಟೆಸ್ಟ್ ಶತಕವನ್ನು ಬಾರಿಸಿದ್ದು, ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
23ರ ಹರೆಯದ ಜೈಸ್ವಾಲ್ ಜಗತ್ತಿನಾದ್ಯಂತದ ಎಲ್ಲಾ ತಂಡಗಳ ವಿರುದ್ಧ ಭಿನ್ನ ಪರಿಸ್ಥಿತಿಗಳಲ್ಲಿ ಶತಕಗಳನ್ನು ಬಾರಿಸಿದ್ದಾರೆ. ಶುಕ್ರವಾರ ಅವರು ಏಳು ಟೆಸ್ಟ್ ಶತಕಗಳನ್ನು ಬಾರಿಸಿದ ಭಾರತದ ಎರಡನೇ ಅತಿ ಕಿರಿಯ ಆಟಗಾರನಾದರು. ಈ ಮೂಲಕ ಅವರು ಅವರು ವಿರಾಟ್ ಕೊಹ್ಲಿ ಮತ್ತು ಸುನೀಲ್ ಗವಾಸ್ಕರ್ ಮುಂತಾದ ದಿಗ್ಗಜರನ್ನು ಹಿಂದಿಕ್ಕಿದ್ದಾರೆ.
ಹೊಸದಿಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಮ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶತಕ ಬಾರಿಸುವ ಮೂಲಕ ಜೈಸ್ವಾಲ್ ಶ್ರೇಷ್ಠರ ಗುಂಪಿಗೆ ಸೇರ್ಪಡೆಗೊಂಡರು. ಇದಕ್ಕಿಂತ ಮೊದಲು ಕೇವಲ ಮೂವರು ಆಟಗಾರರು 24ನೇ ವರ್ಷಕ್ಕೆ ಕಾಲಿಡುವ ಮೊದಲೇ ಜೈಸ್ವಾಲ್‌ರಿಗಿಂತ ಹೆಚ್ಚಿನ ಶತಕಗಳನ್ನು ಬಾರಿಸಿದ್ದಾರೆ.
ಈ ಶ್ರೇಷ್ಠರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವವರು ಆಸ್ಟ್ರೇಲಿಯದ ಸರ್ ಡಾನ್ ಬ್ರಾಡ್ಮನ್ (12 ಶತಕಗಳು), ಭಾರತದ ಸಚಿನ್ ತೆಂಡುಲ್ಕರ್ (11) ಮತ್ತು ವೆಸ್ಟ್ ಇಂಡೀಸ್‌ನ ಸರ್ ಗ್ಯಾರಿಫೀಲ್ಡ್ ಸೋಬರ್ಸ್ (9). ಭಾರತೀಯರ ಪೈಕಿ, 24ನೇ ವರ್ಷಕ್ಕೆ ಕಾಲಿಡುವ ಮೊದಲು 7 ಅಥವಾ ಹೆಚ್ಚಿನ ಶತಕಗಳನ್ನು ಬಾರಿಸಿದ ಏಕೈಕ ಕ್ರಿಕೆಟಿಗ ಸಚಿನ್ ತೆಂಡುಲ್ಕರ್.