ಪ್ರಾಧ್ಯಾಪಕ ಸವ್ಯಸಾಚಿ ಮರು ನೇಮಕ ಮಾಡದಿದ್ದರೆ ಬೋಧನೆ ನಿಲ್ಲಿಸಲಾಗುವುದು ಎಂದ ಅಶೋಕ ವಿ.ವಿ.ಯ 3 ವಿಭಾಗಗಳು
ಸವ್ಯಸಾಚಿ ದಾಸ್ | Photo: thenewsminute.com
ಚಂಡಿಗಢ: ಈ ವಾರದ ಆರಂಭದಲ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದ ಹರ್ಯಾಣದ ಸೋನೆಪತ್ನ ಅಶೋಕ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಕಿರಿಯ ಪ್ರಾಧ್ಯಾಪಕ ಸವ್ಯಸಾಚಿ ದಾಸ್ ಅವರನ್ನು ಮರು ನೇಮಕ ಮಾಡದೇ ಇದ್ದರೆ, ಬೋಧನೆ ನಿಲ್ಲಿಸಲಾಗುವುದು ಎಂದು ವಿ.ವಿ.ಯ ಅರ್ಥಶಾಸ್ತ್ರ, ಇಂಗ್ಲೀಷ್ ಹಾಗೂ ಸೃಜನಶೀಲ ಬರೆವಣಿಗೆ ವಿಭಾಗ ಬುಧವಾರ ಎಚ್ಚರಿಕೆ ನೀಡಿವೆ.
2019ರ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯ ಪರವಾಗಿ ಚುನಾವಣಾ ವಂಚನೆ ನಡೆದಿರುವ ಸಾಧ್ಯತೆ ಕುರಿತು ಸಂಶೋಧನಾ ಪ್ರಬಂಧ ಪ್ರಕಟಿಸಿದ ಒಂದು ವಾರದ ಬಳಿಕ ಸವ್ಯಸಾಚಿ ದಾಸ್ ಅವರು ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಅಶೋಕ ವಿಶ್ವವಿದ್ಯಾನಿಲಯ ಕಿರಿಯ ಪ್ರಾದ್ಯಾಪಕನ ಹುದ್ದೆಗೆ ಸಬ್ಯಸಾಚಿ ದಾಸ್ ಅವರನ್ನು ನಿಶ್ಯರ್ತವಾಗಿ ಮರು ನೇಮಕ ಮಾಡುವಂತೆ ಅರ್ಥಶಾಸ್ತ್ರ ವಿಭಾಗ ಬಹಿರಂಗ ಪತ್ರದಲ್ಲಿ ಆಗ್ರಹಿಸಿದೆ. ಇಂಗ್ಲೀಷ್ ಹಾಗೂ ಸೃಜನಶೀಲ ಬರೆವಣಿಗೆ ವಿಭಾಗಗಳು ಜಂಟಿ ಹೇಳಿಕೆ ನೀಡಿ ಸಬ್ಯಸಾಚಿ ಅವರನ್ನು ಮರು ನೇಮಕ ಮಾಡುವಂತೆ ಆಗ್ರಹಿಸಿವೆ.
2023ರ ಮುಂಗಾರು ಸೆಮಿಸ್ಟರ್ ಮುನ್ನ ಮೂಲಭೂತ ಶೈಕ್ಷಣಿಕ ಸ್ವಾತಂತ್ರಕ್ಕೆ ಸಂಬಂಧಿಸಿ ಸಮಸ್ಯೆಗಳನ್ನು ಪರಿಹರಿಸದೇ ಇದ್ದರೆ, ನಾವು ನಮ್ಮ ಬೋಧನಾ ಜವಾಬ್ದಾರಿಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಅವು ತಿಳಿಸಿವೆ.