×
Ad

3,104 ಔಷಧಗಳು ಪ್ರಮಾಣಿತವಲ್ಲ; 245 ನಕಲಿ ಔಷಧ ಪತ್ತೆ: ಕೇಂದ್ರ ಸರಕಾರ

Update: 2025-07-22 23:46 IST

ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ: ಎಪ್ರಿಲ್ 2024ರಿಂದ ಮಾರ್ಚ್ 2025ರ ಅವಧಿಯಲ್ಲಿ ಪರೀಕ್ಷೆಗೆ ಒಳಪಡಿಸಲಾದ 1,16,323 ಔಷಧ ಮಾದರಿಗಳ ಪೈಕಿ 3,104 ಔಷಧಗಳು ಪ್ರಮಾಣಿತ ಗುಣಮಟ್ಟವನ್ನು ಹೊಂದಿಲ್ಲ. 245 ಔಷಧ ಮಾದರಿಗಳು ನಕಲಿ ಎಂದು ಗುರುತಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮಂಗಳವಾರ ರಾಜ್ಯಸಭೆಗೆ ತಿಳಿಸಿದ್ದಾರೆ.

ಇದೇ ಅವಧಿಯಲ್ಲಿ ನಕಲಿ ಅಥವಾ ಕಲಬೆರಕೆ ಮಾಡಿದ ಔಷಧಗಳ ತಯಾರಿಕೆ, ಮಾರಾಟ ಮತ್ತು ವಿತರಣೆಯ ವಿರುದ್ಧ ದೇಶದಾದ್ಯಾಂತ 961 ಪ್ರಕರಣಗಳಲ್ಲಿ ಡ್ರಗ್ ಕಂಟ್ರೋಲರ್ ಗಳ ಮೂಲಕ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಈ ಕುರಿತು ವಿವರವಾಗಿ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ, ಕಳೆದ ವರ್ಷ (ಎಪ್ರಿಲ್ 2023 - ಮಾರ್ಚ್ 2024)ದಲ್ಲಿ 1,06,150 ಔಷಧ ಮಾದರಿಗಳನ್ನು ಪರೀಕ್ಷಿಸಲಾಗಿತ್ತು. ಅವುಗಳಲ್ಲಿ 2,988 ಮಾದರಿಗಳು ಪ್ರಮಾಣಿತವಲ್ಲದ್ದು, 282 ನಕಲಿ ಔಷಧ ಮಾದರಿಗಳನ್ನು ಪತ್ತೆ ಹಚ್ಚಲಾಗಿತ್ತು. 604 ಪ್ರಕರಣಗಳಲ್ಲಿ ನಕಲಿ ಔಷಧಿಗಳನ್ನು ತಯಾರಿಸಿದ್ದಕ್ಕಾಗಿ ಮಾರಾಟ ಮಾಡಿದ್ದಕ್ಕಾಗಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

1940ರ ಔಷಧಗಳು ಮತ್ತು ಸೌಂದರ್ಯವರ್ಧಕ ಕಾಯ್ದೆಯಡಿಯಲ್ಲಿ ರಚಿಸಲಾದ ನಿಯಮಗಳಡಿಯಲ್ಲಿ ನಕಲಿ, ಕಲಬೆರಕೆ ಔಷಧಗಳನ್ನು ಅಪರಾಧವೆಂದು ಪರಿಗಣಿಸಲಾಗಿದೆ. ನಕಲಿ ಔಷಧಗಳು ರೋಗಿಯ ಆರೋಗ್ಯಕ್ಕೆ ಗಂಭೀರ ಹಾನಿ ಉಂಟುಮಾಡಬಹುದೆಂಬ ದೃಷ್ಟಿಯಿಂದ ಸರ್ಕಾರ ತ್ವರಿತ ಕ್ರಮ ಕೈಗೊಳ್ಳುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಅಂತಹ ಮಾದರಿಗಳು ಪತ್ತೆಯಾದಾಗ, ಕೇಂದ್ರ ಔಷಧ ನಿಯಂತ್ರಣ ಸಂಸ್ಥೆ (CDSCO) ಮೂಲಕ ತಯಾರಕರಿಗೆ ತಕ್ಷಣವೇ ಉತ್ಪನ್ನಗಳನ್ನು ಹಿಂಪಡೆಯಲು ಸೂಚನೆ ನೀಡುತ್ತದೆ. ಮಾರಾಟ ನಿಲ್ಲಿಸಿ, ಪರವಾನಗಿ ಅಮಾನತು ಅಥವಾ ರದ್ದುಪಡಿಸುವಂಥ ಕ್ರಮಗಳನ್ನು ಅನುಸರಿಸಲಾಗುತ್ತದೆ ಎಂದು ಆರೋಗ್ಯ ಸಚಿವರು ಸ್ಪಷ್ಟಪಡಿಸಿದ್ದಾರೆ.

ಔಷಧ ಉದ್ಯಮ ಬಲವರ್ಧನೆಗೆ ಹೊಸ ಯೋಜನೆಯನ್ನು ಪರಿಚಯಿಸಲಾಗುತ್ತಿದೆ.SSDRS ಯೋಜನೆಯಡಿ 850 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಔಷಧ ನಿಯಂತ್ರಣ ವ್ಯವಸ್ಥೆ ಬಲಪಡಿಸಲಾಗುತ್ತಿದೆ. ಈಗಾಗಲೇ 17 ಹೊಸ ಔಷಧ ಪರೀಕ್ಷಾ ಪ್ರಯೋಗಾಲಯಗಳು ನಿರ್ಮಿಸಲಾಗಿದ್ದು, 24 ಹಿಂದಿನ ಪ್ರಯೋಗಾಲಯಗಳನ್ನು ನವೀಕರಿಸಲಾಗಿದೆ. ಈ ಯೋಜನೆಗಾಗಿ 756 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಜೆ ಪಿ ನಡ್ಡಾ ಅವರು ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News