×
Ad

ಭಾರತ-ಪಾಕಿಸ್ತಾನ ಉದ್ವಿಗ್ನತೆ: ಮೇ 15ರವರೆಗೆ ದೇಶದ 32 ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಸ್ಥಗಿತ

Update: 2025-05-10 12:38 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಮೇ 15ರವರೆಗೆ ಶ್ರೀನಗರ ಮತ್ತು ಅಮೃತಸರ ಸೇರಿದಂತೆ ಉತ್ತರ ಹಾಗೂ ಪಶ್ಚಿಮ ಭಾರತದಾದ್ಯಂತ ಇರುವ ನಾಗರಿಕ ವಿಮಾನ ಕಾರ್ಯಾಚರಣೆಯ 32 ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ ಎಂದು ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯ ಪ್ರಕಟಿಸಿದೆ.

ಮೇ 7ರಂದು ಪಾಕಿಸ್ತಾನದಲ್ಲಿನ ಭಯೋತ್ಪಾದಕರ ಶಿಬಿರಗಳ ಮೇಲೆ ಭಾರತ ವೈಮಾನಿಕ ದಾಳಿ ನಡೆಸಿದಾಗಿನಿಂದ ಹಾಗೂ ಅದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನವು ಸತತ ಶೆಲ್ ದಾಳಿ ನಡೆಸುತ್ತಿರುವುದರಿಂದ, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷ ವಿರಾಮವಿಲ್ಲದೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ದೇಶದ ಉತ್ತರ ಮತ್ತು ಪಶ್ಚಿಮ ಭಾಗದಾದ್ಯಂತ ನಾಗರಿಕ ವಿಮಾನ ಯಾನ ಸೇವೆಗಾಗಿನ 32 ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಹಾಗೂ ಸಂಬಂಧಿತ ವಿಮಾನ ಯಾನ ಪ್ರಾಧಿಕಾರಗಳು ಏರ್‌ಮನ್‌ಗಳಿಗೆ ಸರಣಿ ನೋಟಿಸ್‌ಗಳನ್ನು ಜಾರಿಗೊಳಿಸಿವೆ.

"ನಾಗರಿಕ ವಿಮಾನ ಯಾನ ಸೇವೆಗಾಗಿನ ವಿಮಾನ ನಿಲ್ದಾಣಗಳನ್ನು ಮೇ 9ರಿಂದ ಮೇ 15ರ ಮುಂಜಾನೆ 5.29ರವರೆಗೆ (ಭಾರತೀಯ ಕಾಲಮಾನ) ಕಾರ್ಯಾಚರಣೆ ಕಾರಣಗಳಿಗಾಗಿ ಮುಚ್ಚಲಾಗಿದೆ" ಎಂದು ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯದ ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.

ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿರುವ ವಿಮಾನ ನಿಲ್ದಾಣಗಳ ಪೈಕಿ ಜೈಸ್ಮಲೇರ್, ಜಾಮ್‌ನಗರ್, ಜೋಧ್‌ಪುರ್, ಕಾಂಡ್ಲಾ, ಕಾಂಗ್ರಾ (ಗಗ್ಗಲ್), ಕೇಶೋಡ್, ಕಿಶನ್‌ಗಢ್, ಕುಲು ಮನಾಲಿ (ಭುಂತಾರ್) ಹಾಗೂ ಲೇಹ್ ವಿಮಾನ ನಿಲ್ದಣಗಳು ಸೇರಿವೆ ಎಂದು ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಲೂಧಿಯಾನ, ಮುಂದ್ರಾ, ನಾಲಿಯ, ಪಠಾಣ್‌ಕೋಟ್, ಪಟಿಯಾಲ, ಪೋರಬಂದರ್, ರಾಜ್‌ಕೋಟ್ (ಹಿರಾಸರ್), ಸರ್ಸಾವ, ಶಿಮ್ಲಾ, ಶ್ರೀನಗರ, ತೊಯ್ಸೆ ಹಾಗೂ ಉತ್ತರ್‌ಲಾಯಿ ಮುಚ್ಚಲ್ಪಟ್ಟಿರುವ ಇನ್ನಿತರ ವಿಮಾನ ನಿಲ್ದಾಣಗಳಾಗಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದಕ್ಕೂ ಮುನ್ನ, ಮೇ 10ರವರೆಗೆ ನಾಗರಿಕ ವಿಮಾನ ಯಾನ ಸೇವೆಗಾಗಿನ ಕನಿಷ್ಠ 24 ವಿಮಾನ ನಿಲ್ದಾಣಗಳನ್ನು ಮುಚ್ಚುವಂತೆ ಆದೇಶಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News