×
Ad

ಉತ್ತರಾಖಂಡ ಸುರಂಗ ಕುಸಿತ: ಅಂತಿಮ ಹಂತಕ್ಕೆ ರಕ್ಷಣಾ ಕಾರ್ಯಾಚರಣೆ

Update: 2023-11-23 08:04 IST

Photo: PTI

ಡೆಹ್ರಾಡೂನ್: ಉತ್ತರಕಾಶಿಯ ಸಿಲ್ಕ್ಯಾರಾದಲ್ಲಿ ನಿರ್ಮಾಣ ಹಂತದ ಸುರಂಗ ಕುಸಿದು ಸಿಲುಕಿಹಾಕಿಕೊಂಡಿರುವ 41 ಮಂದಿ ಕಾರ್ಮಿಕರನ್ನು ಸುರಕ್ಷಿತವಾಗಿ ತೆರವುಗೊಳಿಸುವ ಹಂತ ಸನಿಹವಾಗಿದ್ದು, ಇವರನ್ನು ಅಗತ್ಯಬಿದ್ದಲ್ಲಿ ಸಾಗಿಸಲು 41 ಆ್ಯಂಬುಲೆನ್ಸ್ ಹಾಗೂ 2 ಹೆಲಿಕಾಪ್ಟರ್ಗಳನ್ನು ಸಜ್ಜುಗೊಳಿಸಲಾಗಿದೆ.

"ಸಿಲುಕಿ ಹಾಕಿಕೊಂಡಿರುವ ಪ್ರತಿಯೊಬ್ಬರಿಗೆ ಮತ್ತು ಅವರನ್ನು ಆರೈಕೆ ಮಾಡುವವರಿಗೆ ಒಂದರಂತೆ ಆ್ಯಂಬುಲೆನ್ಸ್ ವ್ಯವಸ್ಥೆಗೊಳಿಸಲಾಗಿದೆ" ಎಂದು ಉತ್ತರಕಾಶಿ ಮುಖ್ಯ ವೈದ್ಯಾಧಿಕಾರಿ ಡಾ.ಆರ್.ಸಿ.ಎಸ್.ಪನ್ವಾರ್ ಹೇಳಿದ್ದಾರೆ.

ಇವರ ವೈದ್ಯಕೀಯ ನೆರವಿಗಾಗಿ ಚಿನ್ಯಾಲಿಸಾರ್ನಲ್ಲಿರುವ ಸಮುದಾಯ ಆರೋಗ್ಯಕೇಂದ್ರದ 40 ಹಾಸಿಗೆಗಳ ಕೋವಿಡ್ ಆಸ್ಪತ್ರೆಯನ್ನು ಬಳಸಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವವರನ್ನು ಗುರುತಿಸಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗುವುದು. ಡೆಹ್ರಾಡೂನ್ನಿಂದ ಹೆಚ್ಚುವರಿ ವೈದ್ಯರು ಕೂಡಾ ಶೀಘ್ರ ಆಗಮಿಸಲಿದ್ದಾರೆ. ವಿಕೋಪ ನಿರ್ವಹಣೆ ತಂಡದಿಂದ ಎರಡು ಹೆಲಿಕಾಪ್ಟರ್ಗಳನ್ನು ಕೂಡಾ ಕಾರ್ಯಾಚರಣೆಗೆ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ವಿವರಿಸಿದ್ದಾರೆ.

ಸಿಲುಕಿಕೊಂಡಿರುವ ಕಾರ್ಮಿಕರು 11 ದಿನಗಳಿಂದ ಗಾಳಿ- ಬೆಳಕು ಇಲ್ಲದ ಸ್ಥಳದಲ್ಲಿ ಇರುವ ಕಾರಣದಿಂದ ಉಸಿರಾಟದ ತೊಂದರೆ ಸೇರಿದಂತೆ ಹಲವು ವೈದ್ಯಕೀಯ ಸಮಸ್ಯೆಗಳನ್ನು ಎದುರಿಸಿರುವ ಸಾಧ್ಯತೆ ಇದೆ. ಜತೆಗೆ ಬಿಸಿಲು ಇಲ್ಲದ ಕಾರಣ ವಿಟಮಿನ್ ಡಿ ಕೊರತೆಯೂ ಬಾಧಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಕಾರ್ಮಿಕರ ಆರೋಗ್ಯದ ಮೇಲೆ ನಿಗಾ ಇಡಲು 15 ಮಂದಿ ವೈದ್ಯರನ್ನು ಕರೆಸಲಾಗಿದೆ ಎಂದು ಮೂಲಗಳು ಹೇಳಿವೆ. ಆರೋಗ್ಯ ಇಲಾಖೆಯ ಮಹಾನಿರ್ದೇಶಕ ಡಾ.ವಿನಿತಾ ಶಹಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News