5 ರೂ. ಬೆಲೆಯ ಪಾರ್ಲೆ-ಜಿ ಬಿಸ್ಕತ್ ಗಾಝಾದಲ್ಲಿ 2,300 ರೂ.ಗೆ ಮಾರಾಟ?
PC : X/@Mo7ammed_jawad6
ಗಾಝಾ: ಬಾಲಕಿಯೊಬ್ಬಳು ತನ್ನ ತಂದೆಯಿಂದ ಸ್ವೀಕರಿಸುತ್ತಿರುವ ಪಾರ್ಲೆ-ಜಿ ಬಿಸ್ಕತ್ತಿನ ವಿಡಿಯೊ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಆಘಾತಕ್ಕೀಡು ಮಾಡಿದೆ. ಆ ವಿಡಿಯೊದಲ್ಲಿ, ತಾನು ಈ ಬಿಸ್ಕತ್ ಪೊಟ್ಟಣಕ್ಕೆ 2,300 ರೂ. ನೀಡಿದೆ ಎಂದು ಬಾಲಕಿಯೊಬ್ಬಳ ತಂದೆ ಹೇಳಿದ್ದು, ಇಸ್ರೇಲ್-ಗಾಝಾ ನಡುವೆ ಮುಂದುವರಿದಿರುವ ಯುದ್ಧದಿಂದಾಗಿ ಭಾರತದಲ್ಲಿ ಅಗ್ಗದ ಬೆಲೆ ಹೊಂದಿರುವ ಪಾರ್ಲೆ-ಜಿ ಬಿಸ್ಕತ್ತಿಗೆ ಗಾಝಾದಲ್ಲಿ ಬೃಹತ್ ಪ್ರಮಾಣದ ದರ ವ್ಯತ್ಯಾಸವಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮುಹಮ್ಮದ್ ಜಾವದ್, "ದೀರ್ಘಕಾಲದ ಕಾಯುವಿಕೆಯ ನಂತರ, ನಾನು ರವೀಫ್ ಳ ಅಚ್ಚುಮೆಚ್ಚಿನ ಬಿಸ್ಕತ್ ಖರೀದಿಸಿದೆ. ಈ ಬಿಸ್ಕತ್ತಿನ ಬೆಲೆ 1.5 ಯೂರೊದಿಂದ 24 ಯೂರೊಗೆ ಏರಿಕೆಯಾಗಿದ್ದರೂ, ನಾನು ರವೀಫ್ ಳ ಅಚ್ಚುಮೆಚ್ಚಿನ ತಿನಿಸನ್ನು ನಿರಾಕರಿಸಲಾಗಲಿಲ್ಲ" ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್‌ನೊಂದಿಗೆ ರವೀಫ್ ಆಕೆ ತನ್ನ ಅಚ್ಚುಮೆಚ್ಚಿನ ಬಿಸ್ಕತ್ ಸ್ವೀಕರಿಸುತ್ತಿರುವ ವಿಡಿಯೊವನ್ನೂ ಹಂಚಿಕೊಂಡಿರುವ ಮುಹಮ್ಮದ್ ಜಾವದ್, ಆಕೆ ತನ್ನ ತಿನಿಸಿನೊಂದಿಗೆ ಸಂಭ್ರಮಿಸುತ್ತಿರುವ ಚಿತ್ರವನ್ನೂ ಅದರೊಂದಿಗೆ ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್‌ನ ಪ್ರತಿಪಾದನೆಯ ನೈಜತೆಯನ್ನು ತಾನು ಸ್ವತಂತ್ರವಾಗಿ ದೃಢಪಡಿಸಿಕೊಳ್ಳಲು ಸಾಧ್ಯವಾಗದಿದ್ದರೂ, ಸಾಮಾಜಿಕ ಮಾಧ್ಯಮದಲ್ಲಿ ಈ ಪೋಸ್ಟ್ ವೈರಲ್ ಆಗಿದೆ. ಈ ಪೋಸ್ಟ್‌ಗೆ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಭಾರಿ ಪ್ರಮಾಣದ ಸಹಾನುಭೂತಿ ವ್ಯಕ್ತವಾಗಿದ್ದು, ಕೆಲವು ಬಳಕೆದಾರರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರನ್ನೂ ತಮ್ಮ ಪೋಸ್ಟ್‌ನೊಂದಿಗೆ ಟ್ಯಾಗ್ ಮಾಡಿದ್ದಾರೆ ಎಂದು Hindustan Times ಸುದ್ದಿ ಸಂಸ್ಥೆ ವರದಿ ಮಾಡಿದೆ.