×
Ad

ಯೆಮೆನ್ ಪ್ರಯಾಣ ನಿಷೇಧ | ಈವರೆಗೆ 579 ಭಾರತೀಯ ಪ್ರಜೆಗಳ ಪಾಸ್‌ಪೋರ್ಟ್ ಮುಟ್ಟುಗೋಲು : ಕೇಂದ್ರ ಸರಕಾರ

Update: 2024-12-13 21:57 IST

Photo: PTI

ಹೊಸದಿಲ್ಲಿ: ಯೆಮೆನ್ ಪ್ರಯಾಣಕ್ಕೆ ವಿಧಿಸಿರುವ ನಿಷೇಧದ ಹೊರತಾಗಿಯೂ ಆ ದೇಶಕ್ಕೆ ಪ್ರಯಾಣಿಸಿದ್ದ 579 ಭಾರತೀಯ ಪ್ರಜೆಗಳ ಪಾಸ್‌ಪೋರ್ಟ್ ಅನ್ನು ಈವರೆಗೆ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಭಾರತದಾದ್ಯಂತ ಇರುವ ಪಾಸ್‌ಪಾಸ್ ಕಚೇರಿಗಳು ಅವನ್ನು ಸ್ವೀಕರಿಸಿವೆ ಎಂದು ಶುಕ್ರವಾರ ಕೇಂದ್ರ ಸರಕಾರ ಲೋಕಸಭೆಗೆ ಮಾಹಿತಿ ನೀಡಿತು.

ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ಒದಗಿಸಿದ ವಿದೇಶಾಂಗ ವ್ಯವಹಾರಗಳ ವಕ್ತಾರ ಕೀರ್ತಿ ವರ್ಧನ್ ಸಿಂಗ್, ಈ ಪೈಕಿ 269 ಪಾಸ್‌ಪೋರ್ಟ್‌ಗಳನ್ನು ಬಿಡುಗಡೆ ಮಾಡಲಾಗಿದೆ ಎಂದೂ ಹೇಳಿದರು.

ಯೆಮೆನ್, ಇರಾನ್, ಇರಾಕ್ ಇತ್ಯಾದಿ ದೇಶಗಳಿಗೆ ಪ್ರಯಾಣಿಸಿರುವ ಹಲವಾರು ವ್ಯಕ್ತಿಗಳ ಪಾಸ್‌ಪೋರ್ಟ್ ಅನ್ನು ವಲಸೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿರುವ ಸಂಗತಿ ಸರಕಾರದ ಗಮನಕ್ಕೆ ಬಂದಿದೆಯೆ, ಬಂದಿದ್ದರೆ ದೇಶಾವಾರು, ರಾಜ್ಯಾವಾರು ಮುಟ್ಟುಗೋಲಾಗಿರುವ ಹಾಗೂ ಬಿಡುಗಡೆಗೊಂಡಿರುವ ಪಾಸ್‌ಪೋರ್ಟ್‌ಗಳ ವಿವರಗಳು ಹಾಗೂ ಮುಟ್ಟುಗೋಲು ಹಾಕಿಕೊಂಡಿದ್ದ ಪಾಸ್‌ಪೋರ್ಟ್‌ಗಳನ್ನು ಬಿಡುಗಡೆ ಮಾಡಲು ಅಳವಡಿಸಿಕೊಂಡಿರುವ ಮಾನದಂಡಗಳ ಕುರಿತು ವಿವರ ಒದಗಿಸುವಂತೆ ಅವರನ್ನು ಪ್ರಶ್ನಿಸಲಾಗಿತ್ತು.

"ದಿನಾಂಕ ಸೆಪ್ಟೆಂಬರ್ 26, 2017ರ ಗೆಝೆಟ್ ಅಧಿಸೂಚನೆ ಸಂಖ್ಯೆ S.O.3223 (E) ಅನ್ವಯ (ಉಲ್ಲೇಖ-1), ಭಾರತ ಸರಕಾರ ಯೆಮೆನ್ ಪ್ರಯಾಣಕ್ಕೆ ವಿಧಿಸಿದ್ದ ನಿಷೇಧದ ಹೊರತಾಗಿಯೂ ಕಳೆದ ಕೆಲವಾರು ವರ್ಷಗಳಿಂದ ಯೆಮೆನ್‌ಗೆ ಪ್ರಯಾಣಿಸಿರುವ ಭಾರತೀಯ ಪ್ರಜೆಗಳ ಪಾಸ್‌ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೊಂಡಿರುವ ಪ್ರಕರಣಗಳಿವೆ" ಎಂದು ತಮಗೆ ಕೇಳಲಾದ ಪ್ರಶ್ನೆಗೆ ಕೀರ್ತಿ ವರ್ಧನ್ ಸಿಂಗ್ ಉತ್ತರ ನೀಡಿದರು.

ಯೆಮೆನ್ ದೇಶದಲ್ಲಿನ ಚಂಚಲ ರಾಜಕೀಯ ಮತ್ತು ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಲ್ಲಿಗೆ ಪ್ರಯಾಣ ಬೆಳೆಸುವುದರ ಮೇಲೆ ನಿಷೇಧ ಹೇರಲಾಗಿತ್ತು. ಆ ಅಧಿಸೂಚನೆ ಇಂದಿಗೂ ಜಾರಿಯಲ್ಲಿದೆ ಎಂದೂ ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News