ಅಮೆರಿಕದಲ್ಲಿ 6.75 ಲಕ್ಷ ದಾಖಲೆರಹಿತ ಭಾರತೀಯ ವಲಸಿಗರಿದ್ದಾರೆ: ಉವೈಸಿ
ಅಸದುದ್ದೀನ್ ಉವೈಸಿ (Photo: PTI)
ಹೊಸದಿಲ್ಲಿ: ಅಮೆರಿಕದಲ್ಲಿ ಅಕ್ರಮವಾಗಿ ವಾಸವಿದ್ದ ಭಾರತೀಯರ ಗಡಿಪಾರು ಕುರಿತು ಕೋಲಾಹಲದ ನಡುವೆಯೇ ಎಐಎಂಐಎಂ ಸಂಸದ ಅಸದುದ್ದೀನ್ ಉವೈಸಿಯವರು, ಪ್ಯೂ ರೀಸರ್ಚ್ನ 2022ರ ವರದಿಯಂತೆ ಅಮೆರಿಕದಲ್ಲಿ ಈಗಲೂ 6.75 ಲಕ್ಷ ದಾಖಲೆರಹಿತ ಭಾರತೀಯ ವಲಸಿಗರು ವಾಸವಾಗಿದ್ದಾರೆ ಮತ್ತು 18,000 ಜನರು ಈಗಲೂ ಅಂತಿಮ ಪಟ್ಟಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.
ಈ ಎಲ್ಲ ಜನರು ಸ್ವದೇಶಕ್ಕೆ ವಾಪಸಾದರೆ ಅದು ಭಾರತಕ್ಕೆ ಹಣ ರವಾನೆಗಳ ಮೇಲೆಯೂ ಪರಿಣಾಮ ಬೀರುತ್ತದೆ. ತಾನು ಅವರಿಗಾಗಿ ಏನು ಮಾಡುತ್ತೇನೆ ಎನ್ನುವುದನ್ನು ಸರಕಾರವು ತಿಳಿಸಬೇಕು ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಉವೈಸಿ ಹೇಳಿದರು.
ಮೋದಿಯವರು ಭಾರತದ ಹೆಸರನ್ನು ಎತ್ತರಕ್ಕೆ ಒಯ್ದಿದ್ದಾರೆ. ಅದನ್ನು ಸೂಪರ್ಪವರ್ ಆಗಿ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಲೇ ಇರುತ್ತಾರೆ. ಆದರೆ ಈಗ ಏನಾಗುತ್ತಿದೆ? ಇಷ್ಟೊಂದು ಅವಮಾನಕಾರಿ ರೀತಿಯಲ್ಲಿ ಭಾರತಿಯ ವಲಸಿಗರನ್ನು ವಾಪಸ್ ಕರೆತರಲಾಗುತ್ತಿದೆ ಏಕೆ ಎಂದು ಪ್ರಶ್ನಿಸಿದರು.
ಈ ಘಟನೆಯು ಭಾರತದಲ್ಲಿಯ ನಿರುದ್ಯೋಗ ಮಟ್ಟವನ್ನು ಪ್ರತಿಬಿಂಬಿಸಿದೆ ಎಂದು ಬೆಟ್ಟು ಮಾಡಿದ ಉವೈಸಿ, ಶೇ.45ರಷ್ಟು ಯುವಜನರು ನಿರುದ್ಯೋಗಿಗಳಾಗಿದ್ದಾರೆ. ಇದೇ ಕಾರಣದಿಂದ ಜನರು ಏಜೆಂಟ್ ಗಳ ಆಮಿಷಕ್ಕೊಳಗಾಗುತ್ತಾರೆ. ಕಷ್ಟಗಳನ್ನು ಸಹಿಸುತ್ತಾರೆ ಮತ್ತು ತಮ್ಮ ಗಮ್ಯಸ್ಥಾನವನ್ನು ಸೇರಲು ದೇಶಗಳನ್ನು ದಾಟುತ್ತಾರೆ. ಇಷ್ಟೊಂದು ನಿರುದ್ಯೋಗ ಏಕಿದೆ ಎನ್ನುವುದಕ್ಕೆ ಸರಕಾರವು ಉತ್ತರಿಸಬೇಕಿದೆ ಎಂದರು.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ
https://whatsapp.com/channel/0029VaA8ju86LwHn9OQpEq28