CWUR ಜಾಗತಿಕ 2000 ಶ್ರೇಯಾಂಕಗಳ ಪಟ್ಟಿಯಲ್ಲಿ 68 ಭಾರತೀಯ ಶಿಕ್ಷಣ ಸಂಸ್ಥೆಗಳು
ಹೊಸದಿಲ್ಲಿ: ಸೆಂಟರ್ ಫಾರ್ ವರ್ಲ್ಡ್ ಯುನಿವರ್ಸಿಟಿ ರ‍್ಯಾಂಕಿಂಗ್( CWUR) ಸೋಮವಾರ ಬಿಡುಗಡೆಗೊಳಿಸಿರುವ 2025ರ ಗ್ಲೋಬಲ್ 2000 ಪಟ್ಟಿಯಲ್ಲಿ ಒಟ್ಟು 68 ಭಾರತೀಯ ವಿವಿಗಳು ಮತ್ತು ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದಿವೆ. ಐಐಎಂ-ಅಹ್ಮದಾಬಾದ್ ಕಳೆದ ವರ್ಷಕ್ಕಿಂತ 18 ಸ್ಥಾನಗಳಷ್ಟು ಕುಸಿದಿದ್ದರೂ ಜಾಗತಿಕವಾಗಿ 428ನೇ ಸ್ಥಾನದಲ್ಲಿದೆ.
CWUR ಶೈಕ್ಷಣಿಕ ಮತ್ತು ಸಂಶೋಧನಾ ಫಲಿತಾಂಶಗಳನ್ನು ಹೆಚ್ಚಿಸಲು ಸರಕಾರಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ವ್ಯೆಹಾತ್ಮಕ ಒಳನೋಟಗಳನ್ನು ಒದಗಿಸುವ ಪ್ರಮುಖ ಸಲಹಾ ಸಂಸ್ಥೆಯಾಗಿದೆ.
ಹಾರ್ವರ್ಡ್ ವಿವಿಯು ಸತತ 14ನೇ ವರ್ಷವೂ ವಿಶ್ವದ ಅಗ್ರ ಶ್ರೇಯಾಂಕಿತ ವಿವಿಯಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಮಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ,ಸ್ಟ್ಯಾನ್‌ಫೋರ್ಡ್ ವಿವಿ,ಕೇಂಬ್ರಿಡ್ಜ್ ವಿವಿ ಮತ್ತು ಆಕ್ಸ್‌ಫರ್ಡ್ ವಿವಿಗಳು ನಂತರದ ಸ್ಥಾನಗಳಲ್ಲಿವೆ. ತನ್ಮೂಲಕ ಇವು ವಿಶ್ವದ ಐದು ಅಗ್ರ ಶ್ರೇಯಾಂಕಿತ ಸಾರ್ವಜನಿಕ ವಿವಿಗಳಾಗಿವೆ.
ಜಾಗತಿಕವಾಗಿ ಉನ್ನತ 10 ವಿವಿಗಳ ಪೈಕಿ ಉಳಿದವು ಪ್ರಿನ್ಸ್‌ಟನ್,ಪೆನ್ಸಿಲ್ವೇನಿಯಾ,ಕೋಲಂಬಿಯಾ,ಯೇಲ್ ಮತ್ತು ಶಿಕಾಗೋ ವಿವಿಗಳಾಗಿದ್ದು,ಇವೆಲ್ಲ ಅಮೆರಿಕದ ಖಾಸಗಿ ಸಂಸ್ಥೆಗಳಾಗಿವೆ. ಶ್ರೇಯಾಂಕ ಪಟ್ಟಿಯಲ್ಲಿ 346 ವಿವಿಗಳೊಂದಿಗೆ ಚೀನಾ ಅಮೆರಿಕವನ್ನು ಹಿಂದಿಕ್ಕಿದ್ದು,ಕಳೆದ ವರ್ಷ ಅದರ 324 ವಿವಿಗಳು ಪಟ್ಟಿಯಲ್ಲಿದ್ದವು.
ಭಾರತವು ಜಾಗತಿಕ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ಹೆಚ್ಚಿಸಿಕೊಳ್ಳುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದ 39 ವಿವಿಗಳ ಶ್ರೇಯಾಂಕಗಳಲ್ಲಿ ಸುಧಾರಣೆಯಾಗಿದೆ,ಇದೇ ವೇಳೆ 29 ವಿವಿಗಳು ಕುಸಿತವನ್ನು ಕಂಡಿವೆ. ಸುಧಾರಿತ ಸಂಶೋಧನಾ ಕಾರ್ಯಕ್ಷಮತೆ ಈ ಏರಿಕೆ ಪ್ರವೃತ್ತಿಗೆ ಪ್ರಮುಖ ಕಾರಣವಾಗಿದ್ದು,ಈ ಕ್ಷೇತ್ರದಲ್ಲಿ 37 ಭಾರತೀಯ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಸಾಧನೆಯನ್ನು ತೋರಿಸಿವೆ ಎಂದು CWUR ತನ್ನ ಅಧಿಕೃತ ಹೇಳಿಕೆಯಲ್ಲಿ ಬೆಟ್ಟು ಮಾಡಿದೆ.
ಈಗಲೂ ಅತ್ಯುನ್ನತ ಶ್ರೇಯಾಂಕಿತ ಭಾರತೀಯ ಸಂಸ್ಥೆಯಾಗಿರುವ ಐಐಎಂ-ಅಹ್ಮದಾಬಾದ್ ಜಾಗತಿಕವಾಗಿ 18 ಸ್ಥಾನಗಳಷ್ಟು ಕುಸಿದು 428ನೇ ಸ್ಥಾನದಲ್ಲಿದೆ. ಅದು ಉದ್ಯೋಗಾರ್ಹತೆಯಲ್ಲಿ ಜಾಗತಿಕವಾಗಿ 11ನೇ ಸ್ಥಾನವನ್ನು ಉಳಿಸಿಕೊಂಡಿದ್ದರೂ ಶಿಕ್ಷಣ ಗುಣಮಟ್ಟ ಸೂಚಕದಲ್ಲಿ ಕುಸಿದಿದೆ. ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) 20 ಸ್ಥಾನಗಳ ಕುಸಿತದೊಂದಿಗೆ 521ನೇ ಸ್ಥಾನದಲ್ಲಿದ್ದರೆ ಐಐಟಿ ಮದ್ರಾಸ್ 21 ಸ್ಥಾನಗಳ ಜಿಗಿತದೊಂದಿಗೆ 561ನೇ ಸ್ಥಾನಕ್ಕೇರಿದೆ. ಐಐಟಿ-ಬಾಂಬೆ 562 ಮತ್ತು ಐಐಟಿ-ದಿಲ್ಲಿ 582ನೇ ಸ್ಥಾನದಲ್ಲಿವೆ.
ಭಾರತದ ಅಗ್ರ 10 ಸಂಸ್ಥೆಗಳಲ್ಲಿ ದಿಲ್ಲಿ ವಿವಿ(636),ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಾಮೆಂಟಲ್ ರೀಸರ್ಚ್(644), ಐಐಟಿ-ಖರಗಪುರ(689),ಅಕಾಡೆಮಿ ಆಫ್ ಸೈಂಟಿಫಿಕ್ ಆ್ಯಂಡ್ ಇನ್ನೋವೇಟಿವ್ ರೀಸರ್ಚ್(736) ಮತ್ತು ಹೋಮಿ ಬಾಬಾ ನ್ಯಾಷನಲ್ ಇನಸ್ಟಿಟ್ಯೂಟ್(820) ಕೂಡ ಸೇರಿವೆ.
ಶ್ರೇಯಾಂಕ ಪಟ್ಟಿಯಲ್ಲಿ 68 ಸಂಸ್ಥೆಗಳೊಂದಿಗೆ ಭಾರತವು ವಿಶ್ವದ ಉನ್ನತ ವಿವಿಗಳಲ್ಲಿ ಉತ್ತಮ ಪ್ರಾತಿನಿಧ್ಯವನ್ನು ಹೊಂದಿದೆ. ಸರಕಾರದಿಂದ ಹೆಚ್ಚಿನ ಆರ್ಥಿಕ ನೆರವು ಲಭಿಸಿದರೆ ಹಾಗೂ ಶಿಕ್ಷಣ ಮತ್ತು ವಿಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ಭಾರತವು ಜಾಗತಿಕವಾಗಿ ಇನ್ನಷ್ಟು ಸ್ಪರ್ಧಾತ್ಮಕವಾಗುತ್ತದೆ ಎಂದು CWUR ಅಧ್ಯಕ್ಷ ನದೀಮ್ ಮಹಾಸೆನ್ ಹೇಳಿದ್ದಾರೆ.
ಟೋಕಿಯೊ ವಿವಿಯು ಜಾಗತಿಕವಾಗಿ 13ನೇ ಶ್ರೇಯಾಂಕದೊಂದಿಗೆ ಏಶ್ಯಾದಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ.