×
Ad

ಆರೋಪಿ ಮೃತಪಟ್ಟ ಬಳಿಕ ಖುಲಾಸೆ| 7/11ರ ಸ್ಫೋಟ ಪ್ರಕರಣದಲ್ಲಿ ತಪ್ಪಾಗಿ ಶಿಕ್ಷೆ ಅನುಭವಿಸಿದ ವ್ಯಕ್ತಿಯ ಸಮಾಧಿಯ ಎದುರು ಖುಲಾಸೆ ಆದೇಶವನ್ನು ಓದಿದ ಸಂಬಂಧಿಕರು

Update: 2025-09-01 12:26 IST

Photo credit: maktoobmedia.com

ನಾಗ್ಪುರ: 2006ರಲ್ಲಿ ನಡೆದಿದ್ದ ಮುಂಬೈ ಬಾಂಬ್ ಸ್ಫೋಟದಲ್ಲಿ ಆರೋಪಿಯಾಗಿದ್ದ ಕಮಲ್ ಅಹ್ಮದ್ ವಕೀಲ್ ಅಹ್ಮದ್ ಅನ್ಸಾರಿ ಎಂಬವರ ಸಮಾಧಿ ಎದುರು ಅವರ ಸಂಬಂಧಿಕರು ಬಾಂಬೆ ಹೈಕೋರ್ಟ್ ನ ಖುಲಾಸೆ ಆದೇಶವನ್ನು ಗಟ್ಟಿಯಾಗಿ ಓದಿದ್ದು, ಅವರು ಅಮಾಯಕರಾಗಿದ್ದರು ಎಂಬುದನ್ನು ಸಾರ್ವಜನಿಕವಾಗಿ ತಿಳಿಯುವಂತೆ ಮಾಡಿರುವ ಘಟನೆ ವರದಿಯಾಗಿದೆ.

ರವಿವಾರ ಅನ್ಸಾರಿ ಸಮಾಧಿಗೆ ಭೇಟಿ ನೀಡಿದ ಕುಟುಂಬದ ಸದಸ್ಯರು ಹಾಗೂ ಸಮುದಾಯದ ಸದಸ್ಯರು, ಮುಂಬೈ ರೈಲು ಸ್ಫೋಟದಲ್ಲಿ ಭಾಗಿಯಾಗಿದ್ದರು ಎಂದು ಅನ್ಸಾರಿಯನ್ನು ತಪ್ಪಾಗಿ ಸಿಲುಕಿಸಲಾಗಿತ್ತು ಎಂದು ಆರೋಪಿಸಿದರಲ್ಲದೆ, ಈ ಕುರಿತು ವ್ಯವಸ್ಥೆ ಹೊಣೆ ಹೊರಬೇಕು ಎಂದು ಆಗ್ರಹಿಸಿದರು.

ಮುಂಬೈನಲ್ಲಿ 180ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದ್ದ ರೈಲು ಸ್ಫೋಟ ಪ್ರಕರಣದಲ್ಲಿ ಮೃತ ಅನ್ಸಾರಿ ಸೇರಿದಂತೆ ಎಲ್ಲ 12 ಮಂದಿ ಆರೋಪಿಗಳನ್ನು ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿತ್ತು. ಈ ಪ್ರಕರಣವನ್ನು ನಿರೂಪಿಸುವಲ್ಲಿ ಪ್ರಾಸಿಕ್ಯೂಷನ್ ದಯನೀಯವಾಗಿ ವಿಫಲವಾಗಿದೆ ಹಾಗೂ ಆರೋಪಿಗಳು ಅಪರಾಧ ಕೃತ್ಯ ನಡೆಸಿದ್ದರು ಎಂಬುದನ್ನು ನಂಬಲಸಾಧ್ಯವಾಗಿದೆ ಎಂದು ತನ್ನ ಆದೇಶದಲ್ಲಿ ನ್ಯಾಯಾಲಯ ಹೇಳಿತ್ತು. ಆದರೆ 2021ರ ಕೋವಿಡ್-19 ಸಾಂಕ್ರಾಮಿಕದ ವೇಳೆ ಅನ್ಸಾರಿ ಅವರು ಮೃತಪಟ್ಟಿದ್ದಾರೆ.

ಅನ್ಸಾರಿಯ ಸಮಾಧಿಗೆ ಭೇಟಿ ನೀಡಿದ್ದವರ ಪೈಕಿ ಇನೋಸೆನ್ಸ್ ನೆಟ್ ವರ್ಕ್ ನ ಪ್ರಧಾನ ಕಾರ್ಯದರ್ಶಿ ಡಾ. ಅಬ್ದುಲ್ ವಹೀದ್ ಶೇಖ್, ನಾಗ್ಪುರದ ಜಮೀಯತ್-ಇ-ಉಲೆಮಾದ ಅಧ್ಯಕ್ಷ ಖಾರಿ ಸಬೀರ್ ಹಾಗೂ ಅನ್ಸಾರಿ ಅವರ ಕಿರಿಯ ಸಹೋದರ ಕೂಡಾ ಸೇರಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಡಾ. ಅಬ್ದುಲ್ ವಹೀದ್ ಶೇಖ್, “ಅವರನ್ನು 16 ವರ್ಷಗಳ ಕಾಲ ಜೈಲಿನಲ್ಲಿಡಲಾಗಿತ್ತು. ಅವರ ಘನತೆಯನ್ನು ಹಾಳುಗೆಡವಲಾಯಿತು, ಕುಟುಂಬವನ್ನು ಖಿನ್ನಗೊಳಿಸಲಾಯಿತು. ಈ ತೀರ್ಪು ತೀರಾ ತಡವಾಗಿ ಬಂದಿದೆ” ಎಂದು ವಿಷಾದಿಸಿದರು.

ಜುಲೈ 11, 2006ರಲ್ಲಿ ಮುಂಬೈನ ಪಶ್ಚಿಮ ಮಾರ್ಗದ ವಿವಿಧ ಸ್ಥಳಗಳಲ್ಲಿ ಮುಂಬೈ ಲೋಕಲ್ ಟ್ರೈನ್ ಗಳಲ್ಲಿ ಏಳು ಸ್ಫೋಟಗಳು ಸಂಭವಿಸಿದ್ದವು. ಈ ಸ್ಫೋಟದಲ್ಲಿ 180ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.

ಇತ್ತೀಚೆಗೆ ಈ ಪ್ರಕರಣದ ತೀರ್ಪು ಪ್ರಕಟಿಸಿದ್ದ ಬಾಂಬೆ ಹೈಕೋರ್ಟ್, “ಆರೋಪಿಗಳ ಎಲ್ಲ ತಪ್ಪೊಪ್ಪಿಗಳೂ ಒಪ್ಪಿಗೆಗೆ ಅರ್ಹವಾಗಿಲ್ಲ ಹಾಗೂ ಅವು ನಕಲು ಮಾಡಿದಂತಿವೆ” ಎಂದು ಅಭಿಪ್ರಾಯ ಪಟ್ಟು, ಎಲ್ಲ 12 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News