×
Ad

ಛತ್ತೀಸ್‌ಗಢ | ಬೀದಿ ನಾಯಿ ಕಲುಷಿತಗೊಳಿಸಿದ ಆಹಾರವನ್ನೇ ಮಕ್ಕಳಿಗೆ ಬಡಿಸಿದ ಶಾಲೆ : ಮುನ್ನೆಚ್ಚರಿಕಾ ಕ್ರಮವಾಗಿ 78 ವಿದ್ಯಾರ್ಥಿಗಳಿಗೆ ರೇಬೀಸ್ ಚುಚ್ಚುಮದ್ದು!

Update: 2025-08-03 13:40 IST

ಸಾಂದರ್ಭಿಕ ಚಿತ್ರ (credit: indiatoday.in)

ರಾಯ್ಪುರ : ಛತ್ತೀಸ್‌ಗಢದ ಬಲೋಡಬಝಾರ್ ಜಿಲ್ಲೆಯ ಸರಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟಕ್ಕೆ ಬೀದಿ ನಾಯಿ ಕಲುಷಿತಗೊಳಿಸಿದ ಆಹಾರವನ್ನು ನೀಡಲಾಗಿದೆ. ಇದರಿಂದಾಗಿ ಶಾಲೆಯಲ್ಲಿ ಊಟ ಸೇವಿಸಿದ ಮಕ್ಕಳಿಗೆ ರೇಬೀಸ್ ವಿರೋಧಿ ಲಸಿಕೆ ನೀಡಲಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಪಲಾರಿ ಬ್ಲಾಕ್‌ನ ಲಚ್ಚನ್‌ಪುರದ ಸರಕಾರಿ ಮಾಧ್ಯಮಿಕ ಶಾಲೆಯಲ್ಲಿ ಜುಲೈ 29ರಂದು ಘಟನೆ ನಡೆದಿದೆ. ಈ ಕುರಿತು ತನಿಖೆ ನಡೆಯುತ್ತಿದೆ.

ಮಧ್ಯಾಹ್ನದ ಪದಾರ್ಥಕ್ಕೆ ಬೇಯಿಸಿಟ್ಟಿದ್ದ ತರಕಾರಿಗಳನ್ನು ಬೀದಿ ನಾಯಿ ಕಲುಷಿತಗೊಳಿಸಿದೆ ಎಂದು ಕೆಲವು ವಿದ್ಯಾರ್ಥಿಗಳು ಘಟನೆಯ ಬಗ್ಗೆ ಶಿಕ್ಷಕರಿಗೆ ಮಾಹಿತಿ ನೀಡಿದ್ದರು. ಶಿಕ್ಷಕರು ಆಹಾರವನ್ನು ಬಡಿಸದಂತೆ ಸ್ವಸಹಾಯ ಸಂಘದ ಸದಸ್ಯರಿಗೆ ಹೇಳಿದ್ದರು. ಆದರೆ, ಆಹಾರ ಕಲುಷಿತವಾಗಿಲ್ಲ ಎಂದು ಹೇಳಿಕೊಂಡು ಅದೇ ಆಹಾರವನ್ನು ಮಕ್ಕಳಿಗೆ ನೀಡಲಾಗಿದೆ. ಒಟ್ಟು 84 ವಿದ್ಯಾರ್ಥಿಗಳು ಆಹಾರವನ್ನು ಸೇವಿಸಿದ್ದರು.

ಈ ಬಗ್ಗೆ ಮಕ್ಕಳು ಪೋಷಕರಿಗೆ ತಿಳಿಸಿದ್ದಾರೆ. ನಂತರ ಪೋಷಕರು ಮತ್ತು ಗ್ರಾಮಸ್ಥರು ಶಾಲಾ ನಿರ್ವಹಣಾ ಸಮಿತಿ ಅಧ್ಯಕ್ಷ ಜಲೇಂದ್ರ ಸಾಹು ಸೇರಿದಂತೆ ಶಾಲೆಯ ಆಡಳಿತ ಮಂಡಳಿಯನ್ನು ಸಂಪರ್ಕಿಸಿದ್ದಾರೆ. ಕಲುಷಿತ ಆಹಾರ ನೀಡಬಾರದು ಎಂಬ ಸೂಚನೆ ನೀಡಿದ್ದರೂ, ಅದನ್ನೇ ಮಕ್ಕಳಿಗೆ ನೀಡಿದ ಸ್ವಸಹಾಯ ಸಂಘದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಇದಾದ ಬಳಿಕ ಮಕ್ಕಳಿಗೆ ರೇಬೀಸ್ ವಿರೋಧಿ ಲಸಿಕೆಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಲಚನ್‌ಪುರ ಆರೋಗ್ಯ ಕೇಂದ್ರದ ಉಸ್ತುವಾರಿ ವೀಣಾ ವರ್ಮಾ, ಮೊದಲ ಡೋಸ್‌ನಿಂದ ಯಾವುದೇ ಅಡ್ಡಪರಿಣಾಮವಿಲ್ಲ. ಗ್ರಾಮಸ್ಥರು, ಪೋಷಕರು ಮತ್ತು ಎಸ್ಎಂಸಿ ಸದಸ್ಯರ ಬೇಡಿಕೆಯ ಮೇರೆಗೆ ಲಸಿಕೆಯನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ದೀಪಕ್ ನಿಕುಂಜ್ ಮತ್ತು ಬ್ಲಾಕ್ ಶಿಕ್ಷಣಾಧಿಕಾರಿ ನರೇಶ್ ವರ್ಮಾ ಮತ್ತು ಇತರ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳು, ಪೋಷಕರು, ಶಿಕ್ಷಕರು ಮತ್ತು ಶಾಲಾ ನಿರ್ವಹಣಾ ಸಮಿತಿ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News