ಶ್ರೀಲಂಕಾದಿಂದ 8 ಮಂದಿ ಭಾರತೀಯ ಮೀನುಗಾರರ ಬಂಧನ: ವಿದೇಶಾಂಗ ವ್ಯವಹಾರಗಳ ಸಚಿವರಿಗೆ ಮಾಹಿತಿ ನೀಡಿ, ಕ್ರಮ ಕೈಗೊಳ್ಳುವಂತೆ ಕೋರಿದ ಸ್ಟಾಲಿನ್
Photo Credit: PTI
ಚೆನ್ನೈ: ಎಂಟು ಮಂದಿ ಭಾರತೀಯ ಮೀನುಗಾರರನ್ನು ಶ್ರೀಲಂಕಾ ಬಂಧಿಸಿದೆ ಎಂದು ರವಿವಾರ ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಅವರು ಸುರಕ್ಷಿತವಾಗಿ ವಾಪಸು ಮರಳಲು ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರಿಗೆ ಪತ್ರ ಬರೆದಿರುವ ಸ್ಟಾಲಿನ್, “ಭಾರತೀಯ ಮೀನುಗಾರರು, ನಿರ್ದಿಷ್ಟವಾಗಿ ತಮಿಳುನಾಡಿನ ಮೀನುಗಾರರ ಜೀವನೋಪಾಯಕ್ಕೆ ತೊಂದರೆಯನ್ನುಂಟು ಮಾಡುವಂತಹ ಗಂಭೀರ ಕಳವಳಕಾರಿ ಸಂಗತಿಯತ್ತ ನಿಮ್ಮ ತುರ್ತು ಗಮನವನ್ನು ಸೆಳೆಯಲು ಬಯಸುತ್ತೇನೆ” ಎಂದು ಹೇಳಿದ್ದಾರೆ.
ರವಿವಾರ (ಜೂನ್ 29) ಶ್ರೀಲಂಕಾ ನೌಕಾಪಡೆಯು ರಾಮೇಶ್ವರಂನ ಎಂಟು ಮಂದಿ ಮೀನುಗಾರರನ್ನು ಬಂಧಿಸಿದ್ದು, ಅವರಿಂದ ಯಾಂತ್ರಿಕ ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇಂತಹ ಘಟನೆಗಳು ದೋಣಿಗಳು ಹಾಗೂ ಸಲಕರಣೆಗಳ ಹಾನಿಗೆ ಕಾರಣವಾಗಲಿದ್ದು, ಸುದೀರ್ಘ ಕಾಲ ವಶದಲ್ಲಿರಿಸಿಕೊಳ್ಳುವುದರಿಂದ, ಸಂತ್ರಸ್ತ ಮೀನುಗಾರರ ಕುಟುಂಬಗಳು ತೀವ್ರ ಮಾನಸಿಕ ಕ್ಷೋಭೆಗೆ ಗುರಿಯಾಗಬೇಕಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
“ಶ್ರೀಲಂಕಾ ನೌಕಾಪಡೆ ವಶಕ್ಕೆ ಪಡೆದಿರುವ ಮೀನುಗಾರರು ಹಾಗೂ ಅವರ ದೋಣಿಗಳು ಸುರಕ್ಷಿತವಾಗಿ ವಾಪಸು ಮರಳುವುದನ್ನು ಖಾತರಿ ಪಡಿಸಲು ನೀವು ಶೀಘ್ರವಾಗಿ ಮಧ್ಯಪ್ರವೇಶಿಸಬೇಕು ಎಂದು ನಾನು ಮನವಿ ಮಾಡುತ್ತೇನೆ” ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.
“ಮೀನುಗಾರಿಕೆ ಋತು ಈಗಷ್ಟೇ ಪ್ರಾರಂಭಗೊಂಡಿದ್ದು, ಮೀನುಗಾರಿಕೆ ಸಂಬಂಧಿತ ವಿಷಯಗಳಲ್ಲಿ ಶ್ರೀಲಂಕಾ ಪ್ರಾಧಿಕಾರಗಳು ಸಂಯಮ ವಹಿಸುವಂತೆ ಹಾಗೂ ಪರಸ್ಪರ ತಿಳಿವಳಿಕೆ ಹೊಂದಿರುವಂತೆ ಮಾಡಲು ಸಕ್ರಿಯ ರಾಜತಾಂತ್ರಿಕ ಮಾತುಕತೆಗಳಿಗೆ ಚಾಲನೆ ನೀಡಬೇಕು ಎಂದು ನಾನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮನವಿ ಮಾಡುತ್ತೇನೆ” ಎಂದೂ ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ವಾರ್ಷಿಕ ಮೀನುಗಾರಿಕೆ ನಿಷೇಧ ಈಗಷ್ಟೇ ಅಂತ್ಯಗೊಂಡು, ಸದ್ಯ ಮೀನುಗಾರಿಕೆ ಋತು ಪ್ರಾರಂಭಗೊಂಡಿರುವುದರಿಂದ, ಮೀನುಗಾರರು ತಮ್ಮ ಜೀವನೋಪಾಯಕ್ಕಾಗಿ ಸಮುದ್ರಕ್ಕಿಳಿದಿದ್ದರು.