ಸ್ತ್ರೀವಾದಿ ಇತಿಹಾಸತಜ್ಞೆ ಉಮಾ ಚಕ್ರವರ್ತಿ ಉಪನ್ಯಾಸ ರದ್ದುಗೊಳಿಸಿದ ಮುಂಬೈನ ಎಸ್‌ಎನ್‌ಡಿಟಿ ವಿವಿ
ಸ್ತ್ರೀವಾದಿ ಇತಿಹಾಸತಜ್ಞೆ ಉಮಾ ಚಕ್ರವರ್ತಿ | Photo Credit : X
ಮುಂಬೈ, ಮಾ.7: ಇಲ್ಲಿಯ ಶ್ರೀಮತಿ ನಾಥಿಬಾಯಿ ದಾಮೋದರ ಠಾಕರಸಿ (ಎಸ್‌ಎನ್‌ಡಿಟಿ) ಮಹಿಳಾ ವಿವಿಯು ಮಾ.14ರಂದು ನಿಗದಿಯಾಗಿದ್ದ ತನ್ನ 16ನೇ ನೀರಾ ದೇಸಾಯಿ ಸ್ಮಾರಕ ಉಪನ್ಯಾಸವನ್ನು ರದ್ದುಗೊಳಿಸಿದೆ. ಸ್ತ್ರೀವಾದಿ ಇತಿಹಾಸ ತಜ್ಞೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಉಮಾ ಚಕ್ರವರ್ತಿಯವರು ಉಪನ್ಯಾಸ ನೀಡಬೇಕಿತ್ತು ಎಂದು ಸುದ್ದಿಸಂಸ್ಥೆ ಶನಿವಾರ ವರದಿ ಮಾಡಿದೆ.
ವಿವಿಯ ಕುಲಪತಿ ಉಜ್ವಲಾ ಚಕ್ರದೇವ ಅವರು ತನಗೆ ಕಾರ್ಯಕ್ರಮದ ಬಗ್ಗೆ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ. ಸಂಸ್ಥೆಯ ಪ್ರಾಧ್ಯಾಪಕಿ ಪುತುಲ್ ಸಾಠೆ ಅವರು ತಾಂತ್ರಿಕ ಕಾರಣಗಳಿಂದ ಉಪನ್ಯಾಸವನ್ನು ರದ್ದುಗೊಳಿಸಲಾಗಿದೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಎಸ್‌ಎನ್‌ಡಿಟಿ ವಿವಿಯ ಮಹಿಳಾ ಸಂಶೋಧನಾ ಕೇಂದ್ರವು ಮಹಾರಾಷ್ಟ್ರ ಸ್ತ್ರೀ ಮುಕ್ತಿ ಪರಿಷದ್ (ಎಂಎಸ್‌ಎಂಪಿ) ಸಹಯೋಗದಲ್ಲಿ ಉಪನ್ಯಾಸವನ್ನು ಆಯೋಜಿಸಿತ್ತು.
ಲಿಂಗ, ಜಾತಿ ಮತ್ತು ಸಾಮಾಜಿಕ ಇತಿಹಾಸ ಕುರಿತು ತನ್ನ ಕೆಲಸಕ್ಕಾಗಿ ಗುರುತಿಸಲ್ಪಟ್ಟಿರುವ ಚಕ್ರವರ್ತಿ ‘ಸ್ತ್ರೀವಾದಿಯೋರ್ವರ ಹಿನ್ನೋಟ: ಸುದೀರ್ಘ ಪಯಣದ ನಾಲ್ಕು ದಶಕಗಳು’ ಶೀರ್ಷಿಕೆಯ ಉಪನ್ಯಾಸವನ್ನು ನೀಡಬೇಕಿತ್ತು.
ಕಾರ್ಯಕ್ರಮದಲ್ಲಿ ಚಕ್ರವರ್ತಿ ನಿರ್ದೇಶನದ ‘ವೋ ಸುಬಹ್ ಹಮೀ ಸೆ ಆಯೇಗಿ’ ಚಿತ್ರದ ಪ್ರದರ್ಶನವೂ ನಿಗದಿಯಾಗಿತ್ತು.
ಚಕ್ರವರ್ತಿಯವರನ್ನು ಆಹ್ವಾನಿಸಿದ್ದಕ್ಕಾಗಿ ವಿವಿಯು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗಳಿಗೆ ಗುರಿಯಾಗಿತ್ತು.
ಈ ಬೆಳವಣಿಗೆ ಕುರಿತು ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ ಚಕ್ರವರ್ತಿ, ‘ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಶುಕ್ರವಾರ ಬೆಳಿಗ್ಗೆ ನನಗೆ ಮಾಹಿತಿ ನೀಡಲಾಗಿತ್ತು. ಐತಿಹಾಸಿಕವಾಗಿ ಮಹಿಳೆಯರ ಶಿಕ್ಷಣ ಮತ್ತು ಅಭಿವ್ಯಕ್ತಿಗೆ ವೇದಿಕೆಯಾದ ಮಹಿಳಾ ವಿವಿಯು ತನ್ನದೇ ಮಹಿಳಾ ಅಧ್ಯಯನ ಕೇಂದ್ರವು ಕಾರ್ಯಕ್ರಮವನ್ನು ಆಯೋಜಿಸಿರುವ ಬಗ್ಗೆ ಆತಂಕಗೊಂಡಿರುವುದು ನನಗೆ ಅಚ್ಚರಿಯನ್ನುಂಟು ಮಾಡಿದೆ’ ಎಂದು ಹೇಳಿದ್ದಾರೆ.
ಕಾರ್ಯಕ್ರಮದ ರದ್ದತಿಗೆ ಆಯೋಜಕರು ಯಾವುದೇ ಅಧಿಕೃತ ಕಾರಣವನ್ನು ನೀಡಿಲ್ಲ ಎಂದು ಎಂಎಸ್‌ಎಂಪಿ ಸದಸ್ಯೆ ಕುಂದಾ ಪಿ.ಎನ್. ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಆದರೆ ಚಕ್ರವರ್ತಿ ಬ್ರಾಹ್ಮಣ ಪಿತೃಪ್ರಭುತ್ವ ಮತ್ತು ಜಾತಿ ವ್ಯವಸ್ಥೆಯನ್ನು ಬಹಿರಂಗವಾಗಿ ಟೀಕಿಸುತ್ತಿದ್ದಾರೆ. ಮಹಿಳಾ ವಿಮೋಚನೆಯ ಕುರಿತು ಬಲಪಂಥೀಯರ ದಬ್ಬಾಳಿಕೆಯ ನಿಲುವನ್ನೂ ಅವರು ಟೀಕಿಸುತ್ತಿದ್ದಾರೆ ಎಂದು ಬೆಟ್ಟುಮಾಡಿದ ಕುಂದಾ, ಕಾರ್ಯಕ್ರಮವನ್ನು ರದ್ದುಗೊಳಿಸಿರುವುದು ವಿವಿ ಕ್ಯಾಂಪಸ್‌ಗಳಲ್ಲಿ ಶೈಕ್ಷಣಿಕ ಚರ್ಚೆಗೆ ಅಪಾಯಕಾರಿ ಎಂದು ಬಣ್ಣಿಸಿದ್ದಾರೆ.