ಮಹಾರಾಷ್ಟ್ರ| ಶಾಲೆಯಲ್ಲಿ ಬಿಸ್ಕತ್ ತಿಂದು 80 ಮಂದಿ ವಿದ್ಯಾರ್ಥಿಗಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು
Photo credit: indiatoday.in
ಛತ್ರಪತಿ ಸಂಭಾಜಿನಗರ: ಪೌಷ್ಟಿಕಾಹಾರ ವಿತರಣಾ ಕಾರ್ಯಕ್ರಮದಡಿಯಲ್ಲಿ ವಿತರಿಸಲಾಗಿದ್ದ ಬಿಸ್ಕತ್ ತಿಂದು ಸುಮಾರು 80 ಮಂದಿ ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ನಡೆದಿದ್ದು, ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ ಸುಮಾರು 8.30 ಗಂಟೆಗೆ ಕೇಕೆತ್ ಜಲಗಾಂವ್ ಗ್ರಾಮದಲ್ಲಿನ ಶಾಲೆಯಲ್ಲಿ ವಿತರಿಸಲಾದ ಬಿಸ್ಕತ್ ಅನ್ನು ಸೇವಿಸಿದ ನಂತರ, ಮಕ್ಕಳಲ್ಲಿ ವಾಕರಿಕೆ ಹಾಗೂ ವಾಂತಿ ಲಕ್ಷಣಗಳು ಕಂಡು ಬಂದಿತು ಎಂದು ಸ್ಥಳೀಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ವಿಷಯ ತಿಳಿಯುತ್ತದ್ದಂತೆಯೆ ಶಾಲೆಯತ್ತ ಧಾವಿಸಿ ಬಂದ ಗ್ರಾಮದ ಮುಖ್ಯಸ್ಥ ಹಾಗೂ ಇನ್ನಿತರ ಪ್ರಾಧಿಕಾರಗಳು, ಅಸ್ವಸ್ಥಗೊಂಡ ಬಾಲಕರನ್ನು ಆಸ್ಪತ್ರೆಗೆ ರವಾನಿಸುವ ವ್ಯವಸ್ಥೆ ಮಾಡಿದರು.
ವಿದ್ಯಾರ್ಥಿಗಳನ್ನೆಲ್ಲ ಗ್ರಾಮೀಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರೆಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಬಾಬಾಸಾಹೇಬ್ ಘುಘೆ, “ಶನಿವಾರ ಬೆಳಗ್ಗೆ ಸುಮಾರು 8.30ರ ವೇಳೆಗೆ ಬಿಸ್ಕತ್ ಸೇವಿಸಿರುವ 257 ವಿದ್ಯಾರ್ಥಿಗಳಲ್ಲಿ ಆಹಾರ ನಂಜಿನ ಲಕ್ಷಣಗಳು ಕಂಡು ಬಂದಿವೆ. ಈ ಪೈಕಿ 153 ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಕರೆ ತರಲಾಗಿದ್ದು, ಕೆಲವರಿಗೆ ಚಿಕಿತ್ಸೆ ನೀಡಿ, ಮನೆಗೆ ವಾಪಸ್ ಕಳಿಸಲಾಗಿದೆ” ಎಂದು ತಿಳಿಸಿದ್ದಾರೆ.
ಆದರೆ, ಗಂಭೀರ ಆಹಾರ ನಂಜು ಲಕ್ಷಣಗಳು ಕಂಡು ಬಂದ ಏಳು ಮಂದಿ ವಿದ್ಯಾರ್ಥಿಗಳನ್ನು ಛತ್ರಪತಿ ಸಂಭಾಜಿನಗರದಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಶಾಲೆಯಲ್ಲಿ 296 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಆಹಾರ ನಂಜಿನ ಕಾರಣ ಕುರಿತ ತನಿಖೆ ಪ್ರಗತಿಯಲ್ಲಿದೆ.