ಸಾಮಾಜಿಕ ಭದ್ರತಾ ಯೋಜನೆಗಳಿಂದ 95 ಕೋಟಿ ಜನರಿಗೆ ಪ್ರಯೋಜನ; ‘ಮನ್ ಕಿ ಬಾತ್’ನಲ್ಲಿ ಪ್ರಧಾನಿ ನರೇಂದ್ರ ಮೋದಿ
Photo : newsonair
ಹೊಸದಿಲ್ಲಿ : ಸುಮಾರು 95 ಕೋಟಿ ಜನರು ಒಂದಲ್ಲ ಒಂದು ಸಾಮಾಜಿಕ ಭದ್ರತಾ ಯೋಜನೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ. 2015ರ ವರೆಗೆ ಸರಕಾರಿ ಯೋಜನೆಗಳು 25 ಕೋಟಿಗಿಂತ ಕಡಿಮೆ ಜನರನ್ನು ತಲುಪಿವೆ ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ಹೇಳಿದ್ದಾರೆ.
ತನ್ನ ಮಾಸಿಕ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ, ಭಾರತದ ಜನಸಂಖ್ಯೆಯ ಶೇ. 64ಕ್ಕಿಂತ ಹೆಚ್ಚು ಜನರು ಒಂದಲ್ಲ ಒಂದು ಭದ್ರತಾ ಯೋಜನೆಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಎಂದು ಹೇಳುವ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್ಒ)ಯ ವರದಿಯನ್ನು ಉಲ್ಲೇಖಿಸಿದರು.
‘‘ಪ್ರಸ್ತುತದ ಭಾರತದ ಹೆಚ್ಚಿನ ಜನರು ಒಂದಲ್ಲ ಒಂದು ಸಾಮಾಜಿಕ ಭದ್ರತೆಯ ಯೋಜನೆಯಿಂದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಅತಿ ಮುಖ್ಯ ವರದಿ ಹೊರ ಬಂದಿದೆ. ಅದರಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ’’ ಎಂದು ಮೋದಿ ತಿಳಿಸಿದ್ದಾರೆ.
ಇದು ಸಾಮಾಜಿಕ ನ್ಯಾಯದ ಉತ್ತಮ ಚಿತ್ರಣವೂ ಹೌದು. ಈ ಯಶಸ್ಸು ಮುಂದೆ ಇನ್ನೂ ಉತ್ತಮವಾಗುತ್ತದೆ ಎಂಬ ನಂಬಿಕೆಯನ್ನು ಹುಟ್ಟು ಹಾಕಿದೆ; ಭಾರತವು ಪ್ರತಿ ಹಂತದಲ್ಲೂ ಇನ್ನಷ್ಟು ಬಲಶಾಲಿಯಾಗುತ್ತದೆ ಎಂದು ಅವರು ಹೇಳಿದರು.
ಭಾರತ ಟ್ರಾಕೋಮಾ ಮುಕ್ತ ಎಂದು ವಿಶ್ವ ಆರೋಗ್ಯ ಸಂಘಟನೆ ಘೋಷಿಸಿರುವ ಕುರಿತಂತೆ ಪ್ರಧಾನಿ ಅವರು ಇದು ‘‘ಗಮನಾರ್ಹ ಮೈಲಿಗಲ್ಲು’’ ಎಂದು ಪ್ರಶಂಸಿಸಿದರು. ಅಲ್ಲದೆ ಈ ಯಶಸ್ಸಿಗೆ ಕಾರಣರಾದ ಆರೋಗ್ಯ ಕಾರ್ಯಕರ್ತರನ್ನು ಅವರು ಶ್ಲಾಘಿಸಿದರು.