×
Ad

ಪಿಜಿ ವೈದ್ಯಕೀಯ ಕೋರ್ಸ್ ಗಳನ್ನು ಆರಂಭಿಸುವ ಆಸ್ಪತ್ರೆಗಳಿಗೆ ಕನಿಷ್ಠ 200 ಹಾಸಿಗೆ ಕಡ್ಡಾಯ

Update: 2023-09-08 23:30 IST

ಸಾಂದರ್ಭಿಕ ಚಿತ್ರ |Photo : PTI


ಹೊಸದಿಲ್ಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗವು ಪ್ರಕಟಿಸಿರುವ ಕರಡು ಮಾರ್ಗದರ್ಶಿ ಸೂತ್ರಗಳ ಪ್ರಕಾರ ಸ್ನಾತಕೋತ್ತರ (ಪಿಜಿ) ವೈದ್ಯಕೀಯ ಪದವಿ ಕೋರ್ಸ್ಗಳು ಆರಂಭಿಸಲು ಬಯಸುವ ಆಸ್ಪತ್ರೆಗಳು ಕನಿಷ್ಠ 200 ಹಾಸಿಗೆಗಳನ್ನು ಹೊಂದಿರಬೇಕು ಹಾಗೂ ಆ ಪೈಕಿ ಶೇ.75ರಷ್ಟು ಹಾಸಿಗೆಗಳು ವರ್ಷವಿಡೀ ಶುಶ್ರೂಷೆಯ ಅಗತ್ಯವಿರುವ ರೋಗಿಗಳಿಂದ ಭರ್ತಿಯಾಗಿರಬೇಕಾಗುತ್ತದೆ.

ಸ್ನಾತಕೋತ್ತರ ತರಬೇತಿಯನ್ನು ನೀಡುವ ವಿಭಾಗಗಳಲ್ಲಿ ಕನಿಷ್ಠ 15 ಶೇಕಡದಷ್ಟು ಆಸ್ಪತ್ರೆಗಳು ತೀವ್ರ ನಿಗಾ ಘಟಕ (ಐಸಿಯು)ದ ಹಾಸಿಗೆಗಳು ಅಥವಾ ಅಧಿಕ ಅವಲಂಬನಾ ಘಟಕ (ಎಚ್ಡಿಯು)ಗಳಲ್ಲಿರಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ ನೂತನ ಕರಡು ಮಾರ್ಗದರ್ಶಿ ಸೂತ್ರಗಳಲ್ಲಿ ಸೂಚಿಸಲಾಗಿದೆ.

ಬಯೋಕೆಮಿಸ್ಟ್ರಿ, ಪ್ಯಾಥೊಲಜಿ, ಮೈಕ್ರೋಬಯಾಲಜಿ ಹಾಗೂ ರೇಡಿಯೋ ಡಯಾಗ್ನೊಸಿಸ್ ವಿಭಾಗಗಳನ್ನು ಈ ಆಸ್ಪತ್ರೆಗಳು ಕಡ್ಡಾಯವಾಗಿ ಹೊಂದಿರಬೇಕು ಎಂದು ನೂತನ ಮಾರ್ಗದರ್ಶಿ ಸೂತ್ರಗಳಲ್ಲಿ ತಿಳಿಸಲಾಗಿದೆ. ನೂತನ ಕರಡು ಮಾನದಂಡಗಳ ಬಗ್ಗೆ ಸಾರ್ವಜನಿಕರು ಸೆಪ್ಟೆಂಬರ್ 15ರೊಳಗೆ ಅಭಿಪ್ರಾಯಗಳನ್ನು ನೀಡುವಂತೆ ಕೋರಲಾಗಿದೆ.

ಒಂದು ವೇಳೆ ಆಯಾ ವಿಭಾಗದಲ್ಲಿ ಕೆಲಸದ ಹೊರೆ ಅಧಿಕವಿದ್ದಲ್ಲಿ ಅದಕ್ಕೆ ಸಮಪ್ರಮಾಣದ ಬೋಧಕವರ್ಗ ಹಾಗೂ ಮೂಲಸೌಕರ್ಯಗಳನ್ನು ಹೆಚ್ಚಿಸುವಂತೆಯೂ ಸೂಚನೆ ನೀಡಲಾಗಿದೆ.

ಪ್ರತಿಯೊಂದು ಬೋಧಕ ವಿಭಾಗಕ್ಕೂ ಒಂದು ಬೋಧನಾ ಕೊಠಡಿಯಿರಬೇಕು ಹಾಗೂ ಅವುಗಳಲ್ಲಿ ಕ್ಲಿನಿಕಲ್ ಪ್ರಕರಣಗಳ ಬಗ್ಗೆ ಚರ್ಚಿಸಲು ಅಥವಾ ಪ್ರಾತ್ಯಕ್ಷಿಕೆಗಳನ್ನು ನೀಡಲು , ಸಮರ್ಪಕ ಸಂಖ್ಯೆಯ ವಿದ್ಯಾರ್ಥಿಗಳನ್ನು ಸ್ಥಳವಕಾಶವಿರಬೇಕು ಎಂದು ಮಾರ್ಗದರ್ಶಿ ಸೂತ್ರಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News