ಬಡತನದ ಬವಣೆ ತಾಳದೆ ಹೆತ್ತ ತಾಯಿಯಿಂದ 5 ಸಾವಿರ ರೂ.ಗೆ ನವಜಾತ ಶಿಶು ಮಾರಾಟ

Update: 2024-05-25 15:38 GMT

ಸಾಂದರ್ಭಿಕ ಚಿತ್ರ

ಅಗರ್ತಲಾ : ಐದು ತಿಂಗಳ ಹಿಂದೆ ತನ್ನ ಪತಿ ಮೃತಪಟ್ಟ ಬಳಿಕ ಕಡುಬಡತನದಲ್ಲಿ ಜೀವನ ನಡೆಸುತ್ತಿದ್ದ ಮಹಿಳೆಯೊಬ್ಬರು, ತನ್ನ ನವಜಾತ ಶಿಶುವನ್ನು 5 ಸಾವಿರ ರೂ.ಗೆ ಮಾರಾಟ ಮಾಡಿದ ದಾರುಣ ಘಟನೆ ತ್ರಿಪುರಾದ ಧಲಾಯಿ ಜಿಲ್ಲೆಯಲ್ಲಿ ಶನಿವಾರ ವರದಿಯಾಗಿದೆ.

ಜನಿಸಿ ನಾಲ್ಕು ದಿನಗಳಷ್ಟೇ ಆಗಿದ್ದ ಈ ಹೆಣ್ಣು ಶಿಶುವನ್ನು ಮಹಿಳೆ ಪಶ್ಚಿಮ ತ್ರಿಪುರಾ ಜಿಲ್ಲೆಯ ಹೆಝಾಮಾರಾದ ದಂಪತಿಗೆ ಮಾರಾಟ ಮಾಡಿದ್ದಳು. ಅದೃಷ್ಟವಶಾತ್ ಪ್ರತಿಪಕ್ಷ ನಾಯಕ ಜಿತೇಂದ್ರ ಚೌಧುರಿ ಅವರು ಮಧ್ಯಪ್ರವೇಶಿಸಿ ಮಗುವನ್ನು ತಾಯಿ ಜೊತೆ ಸೇರಿಸಿದ್ದಾರೆ.

ಗಂಡಾಚೆರ್ರಾ ಉಪವಿಭಾಗದಲ್ಲಿರುವ ತಾರಾಬನ್ ಕಾಲನಿಯ ನಿವಾಸಿ, ಬುಡಕಟ್ಟು ಮಹಿಳೆ ಮೊರಮತಿ ತ್ರಿಪುರಾ (39) ಬುಧವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮರುದಿನವೇ ಆಕೆ ಮಗುವನ್ನು ಹೆಝಾಮಾರಾ ಗ್ರಾಮದ ದಂಪತಿಗೆ 5 ಸಾವಿರ ರೂ.ಗೆ ಮಾರಾಟ ಮಾಡಿದ್ದರು. ಐದು ತಿಂಗಳ ಹಿಂದೆ ತನ್ನ ಪತಿ ಮೃತಪಟ್ಟ ಬಳಿಕ ತಾನು ಬಡತನದ ಬೇಗೆಯಲ್ಲಿ ಬೇಯುತ್ತಿದ್ದುದರಿಂದ, ಮಗುವನ್ನು ಮಾರಾಟ ಮಾಡಬೇಕಾಗಿ ಬಂತು ಎಂದು ಆಕೆ ಹೇಳಿರುವುದಾಗಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಆರಿಂದಮ್ ದಾಸ್ ತಿಳಿಸಿದ್ದಾರೆ.

ಈಗಾಗಲೇ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಪೋಷಿಸುವ ಹೊರೆ ಆಕೆಯ ಮೇಲಿದೆ. ತೀವ್ರ ಹಣಕಾಸುವ ಬಿಕ್ಕಟ್ಟಿನಿಂದ ಬಳಲುತ್ತಿರುವ ಆಕೆಗೆ ಇನ್ನೊಂದು ಮಗುವನ್ನು ಪೋಷಿಸಲು ಭಾರವನ್ನು ಹೊರಲು ಆಕೆ ಸಿದ್ದರಿರಲಿಲ್ಲ. ಈ ಹತಾಶೆಯಿಂದಲೇ ಆಕೆ ಮಗುವನ್ನು ಮಾರಾಟ ಮಾಡಿರುವ ಸಾಧ್ಯತೆಯಿದೆಯೆಂದು ದಾಸ್ ತಿಳಿಸಿದ್ದಾರೆ.

ತೀವ್ರ ಬಡತನದಿಂದಾಗಿ ತಾನು ಮಗುವನ್ನು ಮಾರಾಟ ಮಾಡಿರುವುದಾಗಿ ಮಹಿಳೆಯು ಹೇಳಿದ ವೀಡಿಯೊವನ್ನು ಪ್ರತಿಪಕ್ಷ ನಾಯಕ ಜಿತೇಂದ್ರ ಚೌಧುರಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು. ಆನಂತರ ಮುಖ್ಯಕಾರ್ಯದರ್ಶಿ ಜೆ.ಕೆ.ಸಿಂಗ್, ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಮ್ಯಾಜಿಸ್ಟ್ರೇಟ್ ಆರಿಂದಮ್ ದಾಸ್ ಅವರಿಗೆ ಸೂಚಿಸಿದ್ದರು.

ಕೂಡಲೇ ಕಾರ್ಯಪ್ರವೃತ್ತರಾದ ಆರಿಂದಮ್ ದಾಸ್ ಅವರು ಮರುದಿನೇ ಮಗುವನ್ನು ತಾಯಿಯ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾದರು.

ಕಟ್ಟಿಗೆ ಮಾರಾಟ ಮಾಡಿ ಬಡತನದ ನಡುವೆ ಕುಟುಂಬ ನಿರ್ವಹಣೆ ನಡೆಸುತ್ತಿದ್ದ ಪುರಂಜಯ, ಐದು ತಿಂಗಳ ಹಿಂದೆ ಸೂಕ್ತ ವೈದ್ಯಕೀಯ ಚಿಕಿತ್ಸೆಯಿಲ್ಲದೆ ನಿಧನರಾಗಿದ್ದರು. ಅಲ್ಲದೆ ಈ ಕುಟುಂಬಕ್ಕೆ ಬಿಪಿಎಲ್ ಕಾರ್ಡ್ ಕೂಡಾ ಇದ್ದಿರಲಿಲ್ಲವೆಂದು ಅವರು ಹೇಳಿದರು.

ಸಂಕಷ್ಟದಲ್ಲಿರುವ ಜನರಿಗೆ ನೆರವನ್ನು ಒದಗಿಸಲು ಬಿಜೆಪಿ ಸರಕಾರ ಹಾಗೂ ತ್ರಿಪುರ ಬುಡಕಟ್ಟು ಪ್ರದೇಶಗಳ ಸ್ವಾಯತ್ತ ಜಿಲ್ಲಾ ಮಂಡಳಿ (ಟಿಟಿಎಎಡಿಸಿ) ವಿಫಲವಾಗಿದೆಯೆಂದು ಚೌಧರಿ ಟೀಕಿಸಿದ್ದರು. ಸರಕಾರವು ಇನ್ನೂ ಕೂಡಾ ಮಧ್ಯಪ್ರವೇಶಿಸದೆ ಇದ್ದಲ್ಲಿ ಬುಡಕಟ್ಟು ಪ್ರದೇಶಗಳಲ್ಲಿ ಇಂತಹ ದುರಂತಗಳು ಇನ್ನಷ್ಟು ನಡೆಯುವುನ್ನು ತಪ್ಪಿಸಲು ಸಾಧ್ಯವಿಲ್ಲ ಎಂದವರು ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News