ಅಜಿತ್ ಪವಾರ್ - ಏಕನಾಥ್ ಶಿಂದೆ ನಡುವೆ ಬಿರುಕು?
ಅಜಿತ್ ಪವಾರ್ , ಏಕನಾಥ್ ಶಿಂದೆ | PC : PTI
ಮುಂಬೈ: ಮಹಾರಾಷ್ಟ್ರದ ಇಬ್ಬರು ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಇಬ್ಬರೂ ಪರಸ್ಪರ ಪಕ್ಷಗಳು ಅಥವಾ ಇಲಾಖೆಗಳು ಆಯೋಜಿಸುವ ಕಾರ್ಯಕ್ರಮಗಳನ್ನು ತಪ್ಪಿಸಿಕೊಳ್ಳುತ್ತಿರುವುದರಿಂದ ಅವರ ನಡುವಿನ ಭಿನ್ನಾಭಿಪ್ರಾಯ ಹೆಚ್ಚಿದೆ ಎಂದು ರಾಜಕೀಯ ವಲಯದಲ್ಲಿ ತೀವ್ರ ವಿಶ್ಲೇಷಣೆ ನಡೆಯುತ್ತಿದೆ.
ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ಮಹಾಬಲೇಶ್ವರ ಮಹೋತ್ಸವದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಜರಿದ್ದರೂ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹಾಜರಿರಲಿಲ್ಲ. ಈ ಕಾರ್ಯಕ್ರಮದ ಮುಂದಾಳತ್ವನ್ನು ಶಿವಸೇನೆಯ ಶಂಭುರಾಜೇ ದೇಸಾಯಿ ವಹಿಸಿದ್ದರು. ಇಲಾಖೆಯ ಸಚಿವ ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಇಂದ್ರಾನಿಲ್ ನಾಯಕ್ ಕೂಡ ಗೈರುಹಾಜರಾಗಿದ್ದರು.
ಮಹಾರಾಷ್ಟ್ರದ ಎಲ್ಲಾ ಹಿಂದಿನ ಮುಖ್ಯಮಂತ್ರಿಗಳನ್ನು ಸನ್ಮಾನಿಸಲು ಎನ್‌ಸಿಪಿ ಆಯೋಜಿಸಿದ್ದ 'ಗೌರವಶಾಲಿ ಮಹಾರಾಷ್ಟ್ರ', ಶೀತಲ ಸಮರಕ್ಕೆ ಸಾಕ್ಷಿಯಾದ ಮತ್ತೊಂದು ಕಾರ್ಯಕ್ರಮವಾಗಿತ್ತು. ಶರದ್ ಪವಾರ್ ಕಾರ್ಯಕ್ರಮದಿಂದ ದೂರ ಉಳಿದಿದ್ದರು ಮತ್ತು ಉದ್ಧವ್ ಠಾಕ್ರೆ ಪ್ರಯಾಣ ಮಾಡುತ್ತಿದ್ದ ಕಾರಣ ಹಾಜರಾಗಿರಲಿಲ್ಲ, ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಹಾಲಿ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ಕೂಡ ಹಾಜರಾಗಿರಲಿಲ್ಲ.
ಶರದ್ ಪವಾರ್ ಮೊದಲೇ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದರು. ಆದರೆ ಏಕನಾಥ್ ಶಿಂದೆ ಕಾರ್ಯಕ್ರಮದಿಂದ ಹೊರಗುಳಿದಿದ್ದು ಇಬ್ಬರು ಉಪಮುಖ್ಯಮಂತ್ರಿಗಳು ಪರಸ್ಪರ ಮುಖಾಮುಖಿಗೆ ಇಷ್ಟಪಡುತ್ತಿಲ್ಲ ಎಂಬುದರ ಸಂಕೇತವಾಗಿದೆ.
ಏಕನಾಥ್ ಶಿಂಧೆ 2022 ಮತ್ತು 2024 ರ ನಡುವೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. 2024 ರ ರಾಜ್ಯ ವಿಧಾನಸಭಾ ಚುನಾವಣೆಯ ನಂತರ, ದೇವೇಂದ್ರ ಫಡ್ನವಿಸ್ ಅವರು ರಾಜ್ಯದ ಮುಖ್ಯಮಂತ್ರಿಯಾದರು.
ಇಬ್ಬರ ಮಧ್ಯೆ ಇದ್ದ ಬೂದಿ ಮುಚ್ಚಿದ ಕೆಂಡಕ್ಕೆ, ಬೆಂಕಿ ಹಾಕಿ ತುಪ್ಪ ಸುರಿದಿರುವುದು ಶಿವಸೇನೆಯ ಸಾಮಾಜಿಕ ನ್ಯಾಯ ಇಲಾಖೆಯ ಸಚಿವ ಸಂಜಯ್ ಶಿರ್ಸತ್ ಅವರ ಆಕ್ರೋಶ. ಯಾವುದೇ ಮುನ್ಸೂಚನೆ ನೀಡದೆ, ಸಮಾಲೋಚನೆ ಮಾಡದೇ, ಅನುಮೋದನೆ ಇಲ್ಲದೆ ಅಜಿತ್ ಪವಾರ್ ತಮ್ಮ ಇಲಾಖೆಯಿಂದ 413 ಕೋಟಿ ರೂ.ಗಳ ನಿಧಿಯನ್ನು ಬೇರೆಡೆಗೆ ನೀಡಿದ್ದಾರೆ ಎಂದು ಶಿರ್ಸತ್ ಇತ್ತೀಚೆಗೆ ಆರೋಪಿಸಿದ್ದರು.
ಅಜಿತ್ ಪವಾರ್ ನೇತೃತ್ವದ ಹಣಕಾಸು ಇಲಾಖೆಯು ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಕಾರಣವಾಗಿರುವ ಇಲಾಖೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದ ಸಚಿವರು ಶಿಂದೆ ಮತ್ತು ಫಡ್ನವಿಸ್ ಅವರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಹೇಳಿದ್ದರು.
ಏಕನಾಥ್ ಶಿಂದೆ ಅವರು ಅಜಿತ್ ಪವಾರ್ ಅವರೊಂದಿಗೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಕಳೆದ ತಿಂಗಳು ಮಹಾರಾಷ್ಟ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಈ ವಿಷಯವನ್ನು ಶಿಂದೆ ಪ್ರಸ್ತಾಪಿಸಿದ್ದಾರೆ ಎಂದು ವರದಿಯಾಗಿದೆ.
ಶಿವಸೇನೆಯ ಸಚಿವರು ಮತ್ತು ಶಾಸಕರ ಅಭಿವೃದ್ಧಿ ನಿಧಿಯನ್ನು ಬೇರೆಡೆಗೆ ನೀಡಿದ್ದಕ್ಕಾಗಿ, ಏಕನಾಥ್ ಶಿಂದೆ ಅವರು ಅಜಿತ್ ಪವಾರ್ ಅವರ ಬಗ್ಗೆ ಅಮಿತ್ ಶಾ ಅವರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ಸಚಿವರು ಲಘುಧಾಟಿಯಲ್ಲಿ ಮಾಡಿದ್ದ ಹೇಳಿಕೆಯು ಹಲವಾರು ಊಹಾಪೋಹಗಳಿಗೆ ಕಾರಣವಾಗಿತ್ತು. "ಹಲವಾರು ವರ್ಷಗಳಿಂದ, ನಾನು ಕೂಡ ಮುಖ್ಯಮಂತ್ರಿಯಾಗಬೇಕೆಂದು ನಾನು ಭಾವಿಸುತ್ತಿದ್ದೇನೆ, ಆದರೆ ಅದು ಇನ್ನೂ ಆಗಿಲ್ಲ" ಎಂದು ಅಜಿತ್ ಪವಾರ್ ಇತ್ತೀಚೆಗೆ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಶಿವಸೇನೆಯ (ಯುಬಿಟಿ) ಮುಖವಾಣಿ ಸಾಮ್ನಾ, ಎನ್‌ಸಿಪಿ ಮುಖ್ಯಸ್ಥರಾಗಿರುವ ಅಜಿತ್ ಪವಾರ್ ಅವರನ್ನು ಟೀಕಿಸುತ್ತಾ, ಮಹಾಯುತಿ ಮೈತ್ರಿಕೂಟದ ಪಾಲುದಾರರು ಸುಮ್ಮನೆ ಒಳ ಜಗಳದಲ್ಲಿ ಭಾಗಿಯಾಗಿದ್ದಾರೆ. ಎಲ್ಲಾ ಉನ್ನತ ನಾಯಕರು ಮುಖ್ಯಮಂತ್ರಿಯಾಗಲು ಬಯಸುತ್ತಾರೆ ಎಂದು ಹೇಳಿತ್ತು.
"ಏಕನಾಥ್ ಶಿಂದೆ ನನ್ನ ವಿರುದ್ಧ ಅಮಿತ್ ಶಾ ಅವರಿಗೆ ದೂರು ನೀಡುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಅವರಿಗೆ ಯಾವುದೇ ಸಮಸ್ಯೆ ಇದ್ದರೆ, ಅವರು ಅದನ್ನು ನನ್ನೊಂದಿಗೆ ಆ ಬಗ್ಗೆ ಚರ್ಚಿಸುತ್ತಾರೆ. ನಾವು ನಿಯಮಿತವಾಗಿ ಸಂಪುಟದಲ್ಲಿ ಭೇಟಿಯಾಗುತ್ತೇವೆ. ಇತರ ಪ್ರಮುಖ ಸಭೆಗಳನ್ನೂ ನಡೆಸುತ್ತೇವೆ. ಯಾವುದೇ ಸಮಸ್ಯೆಗಳಿದ್ದರೆ, ಅವುಗಳನ್ನು ಸಂವಾದದ ಮೂಲಕ ಪರಿಹರಿಸಬಹುದು" ಎಂದು ಅಜಿತ್ ಪವಾರ್, ಏಕನಾಥ್ ಶಿಂದೆ ದೂರು ನೀಡಿದ್ದಾರೆ ಎನ್ನುವ ವರದಿಗಳನ್ನು ಅಲ್ಲಗಳೆದಿದ್ದಾರೆ.
ಆದರೆ ವಿರೋಧ ಪಕ್ಷ ಮಹಾ ವಿಕಾಸ್ ಅಘಾಡಿಯು ಸರ್ಕಾರದ ಒಳಗಿನ ಆಂತರಿಕ ಜಗಳದಿಂದಾಗಿ, ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಸಚಿವರು ಮತ್ತು ಇಲಾಖೆಗಳ ನಡುವೆ ಯಾವುದೇ ಸಮನ್ವಯವಿಲ್ಲ ಎಂದು ಆರೋಪಿಸಿದೆ.