×
Ad

ಜೈಲಿನಲ್ಲಿರುವ ಅಪರಾಧಿಯನ್ನೇ ಮದುವೆಯಾಗಲು ಆತನ ಮನೆಯಲ್ಲೇ ಬೀಡು ಬಿಟ್ಟ ಯುವತಿ!

ಉತ್ತರ ಪ್ರದೇಶ | ಅತ್ಯಾಚಾರ ಪ್ರಕರಣಕ್ಕೆ ಹೊಸ ತಿರುವು

Update: 2025-11-01 21:49 IST

ಸಾಂದರ್ಭಿಕ ಚಿತ್ರ

ಸಹರಾನ್‌ಪುರ,ನ.1: ಅತ್ಯಾಚಾರ ಪ್ರಕರಣವೊಂದು ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ಇಲ್ಲಿಯ 18ರ ಹರೆಯದ ಯುವತಿಯೋರ್ವಳು ತನ್ನ ಮೇಲೆ ಅತ್ಯಾಚಾರವೆಸಗಿದ್ದ ಆರೋಪದಲ್ಲಿ ಜೈಲುಪಾಲಾಗಿರುವ ಯುವಕ ವಾಸ್ತವದಲ್ಲಿ ತನ್ನ ಬಾಯ್‌ಫ್ರೆಂಡ್ ಆಗಿದ್ದಾನೆ ಎಂದು ಹೇಳಿಕೊಂಡಿದ್ದಾಳೆ. ಇಷ್ಟೇ ಅಲ್ಲ, ಆತನ ಮನೆಯಲ್ಲಿಯೇ ಠಿಕಾಣಿ ಹೂಡಿದ್ದ ಆಕೆ ತನ್ನ ಗೆಳೆಯ ಜೈಲಿನಿಂದ ಬಿಡುಗಡೆಯಾದ ಬಳಿಕ ಆತನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದಳು. ಪ್ರದೇಶದಲ್ಲಿ ಅಶಾಂತಿ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಸುರಕ್ಷತೆಗಾಗಿ ಆಕೆಯನ್ನು ಸರಕಾರದ ಆಶ್ರಯ ಧಾಮಕ್ಕೆ ಸ್ಥಳಾಂತರಿಸಿದ್ದಾರೆ.

ವರದಿಗಳ ಪ್ರಕಾರ 2022ರಲ್ಲಿ ಯುವತಿ ಇನ್ನೂ ಅಪ್ರಾಪ್ತ ವಯಸ್ಕಳಾಗಿದ್ದಾಗ ನಾಪತ್ತೆಯಾಗಿದ್ದಳು. ನೆರೆಯ ನಿವಾಸಿ ಶಾಕಿಬ್ ಆಕೆಯನ್ನು ಅಪಹರಿಸಿದ್ದಾನೆ ಎಂದು ಆರೋಪಿಸಿ ಪೋಷಕರು ಪೋಲಿಸ್ ದೂರು ದಾಖಲಿಸಿದ್ದರು. ಶಾಕಿಬ್‌ ನನ್ನು ಬಂಧಿಸಿದ್ದ ಪೋಲಿಸರು ಬಾಲಕಿಯನ್ನು ರಕ್ಷಿಸಿದ್ದರು.

ಇತ್ತೀಚಿಗೆ ನ್ಯಾಯಾಲಯವು ಪೊಕ್ಸೊ ಕಾಯ್ದೆಯಡಿ ಶಾಕಿಬ್(21)ಗೆ 20 ವರ್ಷಗಳ ಜೈಲು ಶಿಕ್ಷೆ ಮತ್ತು 65,000 ರೂ.ದಂಡ ವಿಧಿಸಿದೆ.

ಶಾಕಿಬ್ ಜೈಲುಪಾಲಾದ ಬಳಿಕ ಯುವತಿ ಆತನ ಮನೆಗೆ ತೆರಳಿ ಅಲ್ಲಿಯೇ ಇರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಳು. ನ್ಯಾಯಾಲಯದಲ್ಲಿ ವಿಚಾರಣೆ ಸಂದರ್ಭದಲ್ಲಿ ಸುಳ್ಳು ಹೇಳಿಕೆ ನೀಡುವಂತೆ ತನ್ನ ತಂದೆ ತನ್ನನ್ನು ಬಲವಂತಗೊಳಿಸಿದ್ದರು. ಶಾಕಿಬ್ ಜೈಲಿನಿಂದ ಬಿಡುಗಡೆಯಾದ ಬಳಿಕ ಆತನನ್ನೇ ಮದುವೆಯಾಗುತ್ತೇನೆ ಮತ್ತು ಅಲ್ಲಿಯವರೆಗೆ ಇಲ್ಲಿಯೇ ಇರುತ್ತೇನೆ ಎಂದು ಆಕೆ ಸ್ಥಳೀಯ ಅಧಿಕಾರಿಗಳು ಮತ್ತು ಮಾಧ್ಯಮಗಳಿಗೆ ತಿಳಿಸಿದ್ದಳು.

ಶಾಕಿಬ್ ಮನೆಯಲ್ಲಿ ಯುವತಿ ವಾಸವಾಗಿರುವುದು ಪ್ರದೇಶದಲ್ಲಿ ಅಶಾಂತಿಗೆ ಕಾರಣವಾಗಿದ್ದು, ಬುಧವಾರ ಆಕೆಯ ಕುಟುಂಬದವರು ಮತ್ತು ಬಜರಂಗ ದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಸರಕಾರದ ಆಶ್ರಯ ಧಾಮಕ್ಕೆ ಆಕೆಯನ್ನು ಸ್ಥಳಾಂತರಿಸಿದ್ದಾರೆ.

ಈಗ ಪ್ರಾಪ್ತ ವಯಸ್ಕಳಾಗಿರುವ ಯುವತಿ ಕಾನೂನು ಪ್ರಕಾರ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ಹೊಂದಿದ್ದಾಳೆ ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದರು.

ತನ್ನ ಮಗನನ್ನು ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ ಶಾಕಿಬ್‌ ನ ತಂದೆ, ಅಂತಿಮವಾಗಿ ಸತ್ಯ ಹೊರಗೆ ಬರುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News