ಆಧಾರ್ ಕಾರ್ಡ್ ಪೌರತ್ವದ ಪುರಾವೆಯಲ್ಲ: ಸುಪ್ರೀಂ ಕೋರ್ಟ್‌ನಲ್ಲಿ ಚುನಾವಣಾ ಆಯೋಗದ ಹೇಳಿಕೆ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಆಧಾರ್ ಕಾರ್ಡ್ ಅನ್ನು ಪೌರತ್ವದ ಪುರಾವೆಯಾಗಿ ಪರಿಗಣಿಸಲಾಗುವುದಿಲ್ಲ ಎಂದು ಭಾರತೀಯ ಚುನಾವಣಾ ಆಯೋಗವು ಗುರುವಾರ ಸುಪ್ರೀಂ ಕೋರ್ಟ್‌ಗೆ ಹೇಳಿಕೆ ನೀಡಿದೆ.
ಬಿಹಾರ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (Special Intense Revision - SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗವು ಈ ಹೇಳಿಕೆ ನೀಡಿದೆ.
ಬಿಹಾರದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮತ್ತು ಹೆಸರು ತೆಗೆಯುವುದಕ್ಕೆ ವಿಶೇಷ ಪರಿಷ್ಕರಣಾ ಅಭಿಯಾನ ನಡೆಯುತ್ತಿದೆ. ಅದರಂತೆ, 2003ರ ನಂತರದ ಮತದಾರರ ಪಟ್ಟಿಯಲ್ಲಿ ಇರುವವರು ತಮ್ಮ ಪೌರತ್ವದ ದಾಖಲೆಗಳನ್ನು ಸಲ್ಲಿಸಬೇಕು. ಇದಕ್ಕಾಗಿ 11 ದಾಖಲೆಗಳನ್ನು ನೀಡುವಂತೆ ಕೇಳಲಾಗಿದೆ. ಆದರೆ ಈ ಪೈಕಿ ಆಧಾರ್ ಮತ್ತು ಮತದಾರರ ಗುರುತಿನ ಚೀಟಿಯನ್ನು 11 ಪೌರತ್ವದ ದಾಖಲೆಗಳ ಪಟ್ಟಿಯಿಂದ ಹೊರಗಿಡಲಾಗಿದೆ.
ಇದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು, "ಜನಪ್ರತಿನಿಧಿಗಳ ಕಾಯ್ದೆ ಪ್ರಕಾರ ಆಧಾರ್ ಮಾನ್ಯ ದಾಖಲೆ ಆಗಿದ್ದರೂ, ಆಯೋಗವು ಅದನ್ನು ನಿರಾಕರಿಸುತ್ತಿದೆ" ಎಂದು ಆಕ್ಷೇಪಿಸಿದರು.
ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಸುಧಾಂಶು ಧುಲಿಯಾ ಮತ್ತು ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ, "ಆಧಾರ್ ಅನ್ನು ಪೌರತ್ವದ ಪುರಾವೆಯಾಗಿ ಬಳಸುವುದೇಕೆ ಸಾಧ್ಯವಿಲ್ಲ?" ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರವಾಗಿ ಆಯೋಗದ ಪರ ವಕೀಲ ರಾಕೇಶ್ ದ್ವಿವೇದಿ, "ಆಧಾರ್ ಪೌರತ್ವದ ದೃಢೀಕರಣಕ್ಕೆ ಯೋಗ್ಯ ದಾಖಲೆ ಅಲ್ಲ. ಪೌರತ್ವ ನಿರ್ಧಾರ ಮಾಡುವ ಹಕ್ಕು ಗೃಹ ಸಚಿವಾಲಯದ್ದು, ಚುನಾವಣಾ ಆಯೋಗದಲ್ಲ. ಸಂವಿಧಾನದ ವಿಧಿ 326 ರ ಪ್ರಕಾರ ಚುನಾವಣಾ ಆಯೋಗಕ್ಕೆ ಈ ಅಧಿಕಾರವಿದೆ" ಎಂದು ಸ್ಪಷ್ಟಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಬಾಗ್ಚಿ, "2025ರ ಬಿಹಾರ ಚುನಾವಣೆಗೆ ಕೇವಲ ಕೆಲವು ತಿಂಗಳು ಬಾಕಿಯಿರುವ ಸಮಯದಲ್ಲಿ ನೀವು ಮತದಾರರ ಹಕ್ಕು ಅಮಾನತುಗೊಳಿಸುವ ನಿರ್ಧಾರ ಕೈಗೊಂಡರೆ, ಆ ವ್ಯಕ್ತಿಗೆ ತನಗೆ ಏಕೆ ಮತದಾನದ ಹಕ್ಕು ಇಲ್ಲ ಎಂಬುದನ್ನು ತಿಳಿದುಕೊಳ್ಳಲು ಸಮಯವೇ ಸಿಗುವುದಿಲ್ಲ. ಇದು ನ್ಯಾಯಸಮ್ಮತವಲ್ಲ", ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಪೌರತ್ವದ ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಮತದಾರರ ಪಟ್ಟಿಯನ್ನು ಪರಿಷ್ಕರಿಸುವುದು ಸರಿಯಾಗಿಯೇ ಇದೆ. ಆದರೆ ಈ ಪ್ರಕ್ರಿಯೆ ಸಮರ್ಪಕ ಸಮಯದಲ್ಲಿ, ಪಾರದರ್ಶಕ ರೀತಿಯಲ್ಲಿ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿತು.