ದ್ವೇಷ ಭಾಷಣ ಪ್ರಕರಣ | ಅಬ್ಬಾಸ್ ಅನ್ಸಾರಿ ಶಿಕ್ಷೆ ಅಮಾನತುಗೊಳಿಸಿದ ಹೈಕೋರ್ಟ್; ಶಾಸಕ ಸ್ಥಾನ ಪುನಃಸ್ಥಾಪನೆ
ಅಬ್ಬಾಸ್ ಅನ್ಸಾರಿ | PC : PTI
ಲಕ್ನೊ, ಸೆ. 9: 2022ರ ದ್ವೇಷ ಭಾಷಣ ಪ್ರಕರಣದಲ್ಲಿ ಮೌ ಸದಾರ್ ನ ಶಾಸಕ ಅಬ್ಬಾಸ್ ಅನ್ಸಾರಿ ಅವರ ಶಿಕ್ಷೆಯನ್ನು ಅಲಹಾಬಾದ್ ಉಚ್ಚ ನ್ಯಾಯಾಲಯ ಅಮಾನತುಗೊಳಿಸಿದ ಸುಮಾರು 18 ದಿನಗಳ ಬಳಿಕ, ಅವರ ಉತ್ತರಪ್ರದೇಶ ವಿಧಾನ ಸಭೆಯ ಸದಸ್ಯತ್ವವನ್ನು ಸೋಮವಾರ ಮರು ಸ್ಥಾಪಿಸಲಾಗಿದೆ.
ಅಬ್ಬಾಸ್ ಅನ್ಸಾರಿ ಅವರು 2022ರ ವಿಧಾನ ಸಭೆ ಚುನಾವಣೆಯಲ್ಲಿ ಮೌ ಸದರ್ ಕ್ಷೇತ್ರದಿಂದ ಆಗ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಒಪಿ ರಾಜ್‌ಭರ್ ನೇತೃತ್ವದ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ (ಎಸ್‌ಬಿಎಸ್‌ಪಿ)ದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲವು ಸಾಧಿಸಿದ್ದರು.
ರಾಜ್ಯ ವಿಧಾನ ಸಭೆಯಲ್ಲಿ ಅಬ್ಬಾಸ್ ಅನ್ಸಾರಿ ಅವರ ಸದಸ್ಯತ್ವವನ್ನು ಪುನಃಸ್ಥಾಪನೆ ಮಾಡಿರುವುದನ್ನು ಹಿರಿಯ ಅಧಿಕಾರಿಗಳು ದೃಢಪಡಿಸಿದ್ದಾರೆ.
ವಿಧಾನ ಸಭೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ದುಬೆ ಸೋಮವಾರ ಸಂಜೆ ಹೊರಡಿಸಿದ ಆದೇಶದಲ್ಲಿ, ಅಬ್ಬಾಸ್ ಅನ್ಸಾರಿ ಅವರ ಶಿಕ್ಷೆಯನ್ನು ಉಚ್ಚ ನ್ಯಾಯಾಲಯ ಅಮಾತುಗೊಳಿಸಿರುವ ಹಿನ್ನೆಲೆಯಲ್ಲಿ ಅವರ ಸದಸ್ಯತ್ವವನ್ನು ಪುನಃಸ್ಥಾಪಿಸಲಾಗಿದೆ ಎಂದಿದ್ದಾರೆ.
ಮೂರು ವರ್ಷಗಳ ಹಳೆಯ ದ್ವೇಷ ಭಾಷಣ ಪ್ರಕರಣದಲ್ಲಿ ವಿಶೇಷ ಮೌ ನ್ಯಾಯಾಲಯ ಈ ವರ್ಷ ಮೇಯಲ್ಲಿ ಅಬ್ಬಾಸ್ ಅನ್ಸಾರಿ ಅವರಿಗೆ 2 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 2 ಸಾವಿರ ರೂ. ದಂಡ ವಿಧಿಸಿತ್ತು. ಇದು ವಿಧಾನ ಸಭೆಯ ಅವರ ಸದಸ್ಯತ್ವ ಅನರ್ಹಗೊಳ್ಳಲು ಕಾರಣವಾಗಿತ್ತು.