×
Ad

ಸುಳ್ಳು ಸುದ್ದಿ ಹರಡಿ ಸಿಕ್ಕಿಬಿದ್ದ ಎಬಿಪಿ ನ್ಯೂಸ್ ನ ಅಭಿಷೇಕ್ ಉಪಾಧ್ಯಾಯ: ಪ್ರಯೋಗಕ್ಕಾಗಿ ಮಾಡಿದೆ ಎಂದು ಸಮರ್ಥನೆ

Update: 2023-11-15 15:23 IST

ಹೊಸದಿಲ್ಲಿ: ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದ ನಡುವೆ, ಎಬಿಪಿ ನೆಟ್‌ವರ್ಕ್‌ನ ರಾಜಕೀಯ ಸಂಪಾದಕ ಅಭಿಷೇಕ್ ಉಪಾಧ್ಯಾಯ ಅವರು ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್)‌ ವೀಡಿಯೊವನ್ನು ಹಂಚಿಕೊಂಡು, ಹಮಾಸ್‌ ಹೋರಾಟಗಾರರು ಅಲ್‌ ಶಿಫಾ ಆಸ್ಪತ್ರೆಯ ಅಡಿಯಲ್ಲಿ ಸುರಂಗ ನಿರ್ಮಿಸಿ, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದಾರೆ ಎಂದು ಸುಳ್ಳು ಸುದ್ದಿ ಪ್ರತಿಪಾದಿಸಿ ವಿವಾದಕ್ಕೆ ಗುರಿಯಾಗಿದ್ದಾರೆ.

“ಕೊನೆಗೂ, ಇಸ್ರೇಲ್ ತನ್ನ ಅತಿದೊಡ್ಡ ಭೂಕಾರ್ಯಾಚರಣೆಯನ್ನು ಗಾಝಾದೊಳಗೆ ಪ್ರಾರಂಭಿಸಿದೆ. ಇಸ್ರೇಲಿ ಪಡೆಗಳು ಗಾಝಾದ ಅಲ್ ಶಿಫಾ ಆಸ್ಪತ್ರೆಯನ್ನು ತಲುಪಿವೆ. ಹಮಾಸ್ ಇಲ್ಲಿ ಸುರಂಗವನ್ನು ನಿರ್ಮಿಸಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದರು ಎಂದು ವರದಿಯಾಗಿದೆ. ವಸತಿ ಕಟ್ಟಡಗಳು ಮತ್ತು ಆಸ್ಪತ್ರೆಗಳಂತಹ ಸ್ಥಳಗಳನ್ನು ಭಯೋತ್ಪಾದನೆಗಾಗಿ ಬಳಸುತ್ತಿರುವ ಹಮಾಸ್‌ನ ನೈಜ ಸ್ವರೂಪವನ್ನು ಈ ವೀಡಿಯೊವನ್ನು ನೋಡಿ ಅರ್ಥಮಾಡಿಕೊಳ್ಳಿ. ಈ ಹಮಾಸ್‌ಗೆ ಬೆಂಬಲವಾಗಿ ಭಾರತದಲ್ಲಿ ಭಾಷಣಗಳು ಮತ್ತು ರ್ಯಾಲಿಗಳನ್ನು ಮಾಡಲಾಗುತ್ತದೆ ಎಂಬುದನ್ನು ಸಹ ಅರ್ಥಮಾಡಿಕೊಳ್ಳಿ. ಗಾಝಾ ಪರವಾಗಿ ಹಗಲಿರುಳು ಕ್ರಾಂತಿಯ ಧ್ವನಿ ಎತ್ತುವ ಜನರು ಹಮಾಸ್ ಹೆಸರಿನಲ್ಲಿ ಉದ್ದೇಶಪೂರ್ವಕ ನಿಗೂಢ ಮೌನವನ್ನು ವಹಿಸಿದ್ದಾರೆ” ಎಂದು ಉಪಾಧ್ಯಾಯ ಅವರು ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ Altnews.com ಸಹ ಸಂಸ್ಥಾಪಕ ಮುಹಮ್ಮದ್‌ ಝುಬೇರ್‌ ಅವರು ಈ ವಿಡಿಯೋ ಆಗಸ್ಟ್‌ ತಿಂಗಳಿನಿಂದ ಹರಿದಾಡುತ್ತಿದೆ, ಇದು ಹಮಾಸ್‌ಗೆ ಸಂಬಂಧಪಟ್ಟಿದ್ದಲ್ಲ ಎಂದು ತಿಳಿಸಿದ್ದಾರೆ.

“ಹಲೋ 'ಜರ್ನಲಿಸ್ಟ್' ಉಪಾಧ್ಯಾಯ ಅವರೇ, 'ಹಮಾಸ್ ಸುರಂಗಗಳ' ವೀಡಿಯೊ ಆಗಸ್ಟ್‌ನಲ್ಲಿ ಬಂದಿದೆ. ಅಲ್ಲದೆ, ಇದು ಹಮಾಸ್ ಅಲ್ಲ. ವಾಟ್ಸಾಪ್ ಫಾರ್ವರ್ಡ್‌ಗಳನ್ನು ಅವಲಂಬಿಸುವುದನ್ನು ನಿಲ್ಲಿಸಿ" ಎಂದು ಝುಬೈರ್‌ ಟ್ವೀಟ್‌ ಮಾಡಿದ್ದರು.ಕೆಲವು ನೆಟ್ಟಿಗರು ಕೂಡಾ ಉಪಾಧ್ಯಾಯ ಅವರ ಸುಳ್ಳು ಪ್ರತಿಪಾದನೆಗೆ ಟೀಕೆಗಳನ್ನು ಮಾಡಿದ್ದು, ಉಪಾಧ್ಯಾಯ ಹಂಚಿಕೊಂಡಿರುವ ವಿಡಿಯೋವನ್ನು ಆಗಸ್ಟ್‌ನಲ್ಲೇ ಪೋಸ್ಟ್‌ ಮಾಡಲಾಗಿತ್ತು ಎಂಬುದರ ಹಲವು ಸ್ಕ್ರೀನ್‌ ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ.

ಅದಾಗ್ಯೂ, ತನ್ನ ಸುಳ್ಳನ್ನು ಸಮರ್ಥಿಸಿಕೊಂಡಿರುವ ಪತ್ರಕರ್ತ ಉಪಾಧ್ಯಾಯ, ಬುದ್ಧಿಜೀವಿಗಳ ಸೋಗಿನಲ್ಲಿ ಅಡಗಿರುವ ಹಮಾಸ್ ಬೆಂಬಲಿಗರನ್ನು ಬಹಿರಂಗಪಡಿಸಲು ತಾನು ಪ್ರಯೋಗವನ್ನು ನಡೆಸಿರುವುದಾಗಿ ಹೇಳಿದ್ದಾರೆ.

"ಹಲೋ ʼಸತ್ಯ ಪರೀಕ್ಷಕ' @zoo_bear (ಝುಬೈರ್), ಈ ವೀಡಿಯೊವನ್ನು ಕೇವಲ ಪ್ರಯೋಗಕ್ಕಾಗಿ ಪೋಸ್ಟ್ ಮಾಡಲಾಗಿದೆ, ಇದರಿಂದ ಬುದ್ಧಿಜೀವಿಗಳ ಸೋಗಿನಲ್ಲಿ ಅಡಗಿರುವ ಹಮಾಸ್ ಬೆಂಬಲಿಗರು ಬಹಿರಂಗವಾಗಿ ಹೊರಬರುತ್ತಾರೆ. ಬಾಣವು ನಿಖರವಾಗಿ ಗುರಿ ತಲುಪಿದೆ. ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ್ದಕ್ಕಾಗಿ ಧನ್ಯವಾದಗಳು. ಇಂತಹ ಪ್ರಯೋಗಗಳು ಭವಿಷ್ಯದಲ್ಲಿಯೂ ನಡೆಯುತ್ತಲೇ ಇರುತ್ತವೆ. ದಯವಿಟ್ಟು ಸೇರುತ್ತಿರಿ" ಎಂದು ಉಪಾಧ್ಯಾಯ ಟ್ವೀಟ್‌ ಮಾಡಿದ್ದಾರೆ.

ಸುಳ್ಳು ಮಾಹಿತಿಯ ಪ್ರಸಾರ ಮಾಡಿ ಉಪಾಧ್ಯಾಯ ಅವರು ಟೀಕೆಗಳನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ; ಈ ಹಿಂದೆ, ಉಪಾಧ್ಯಾಯ ಅವರು ಉದ್ದೇಶಪೂರ್ವಕವಾಗಿ ದೆಹಲಿಯಲ್ಲಿ ಪ್ರವಾಹ ಉಂಟಾಗಿದೆ ಎಂಬಂತೆ ವರದಿ ಮಾಡಿದ್ದಾರೆಂದು ಆರೋಪಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News