ಮುಸ್ಲಿಂ ಸಹೋದರರ ಮೇಲೆ ಹಲ್ಲೆ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಲು ನಿರಾಕರಣೆ : ಪೊಲೀಸ್ ಅಧಿಕಾರಿ ವಿರುದ್ಧ ಕ್ರಮಕ್ಕೆ ಬಾಂಬೆ ಹೈಕೋರ್ಟ್ ಸೂಚನೆ
ಬಾಂಬೆ ಹೈಕೋರ್ಟ್ | PTI
ಮುಂಬೈ: ಧಾರ್ಮಿಕ ಗುರುತಿನ ಕಾರಣಕ್ಕೆ ನಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿ ಇಬ್ಬರು ಮುಸ್ಲಿಂ ಸಹೋದರರು ನೀಡಿದ ದೂರಿನ ಬಗ್ಗೆ ಎಫ್ಐಆರ್ ದಾಖಲಿಸಲು ನಿರಾಕರಿಸಿದ ಪೊಲೀಸ್ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಾಂಬೆ ಹೈಕೋರ್ಟ್ ಪುಣೆ ಪೊಲೀಸ್ ಆಯುಕ್ತರಿಗೆ ಆದೇಶಿಸಿದೆ.
ಕಳೆದ ಎಪ್ರಿಲ್‌ನಲ್ಲಿ ಭವಾನಿ ಪೇಠ್ ಪ್ರದೇಶದಲ್ಲಿ ಕರಣ್ ಮತ್ತು ಹರ್ಷ್ ಕೆಸ್ವಾನಿ ಎಂಬ ಇಬ್ಬರು ದ್ವಿಚಕ್ರ ವಾಹನದಲ್ಲಿ ಜೋರಾಗಿ ಹಾರ್ನ್ ಹಾಕಿಕೊಂಡು ತೆರಳುತ್ತಿದ್ದರು. ಇದಕ್ಕೆ ಶೋಯೆಬ್ ಉಮರ್ ಸೆಯ್ಯದ್ ಎಂಬವರು ವಿರೋಧಿಸಿದ್ದರಿಂದ ಜಗಳ ನಡೆದಿದೆ ಎನ್ನಲಾಗಿದೆ.
ಸೆಯ್ಯದ್ ಮತ್ತು ಅವರ ಸಹೋದರ ನಡೆಸಿದ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವುದಾಗಿ ಹರ್ಷ್ ಕೆಸ್ವಾನಿ ಆರೋಪಿಸಿದ್ದಾರೆ. ಧರ್ಮದ ಕಾರಣಕ್ಕಾಗಿ ಕೆಸ್ವಾನಿ ಕುಟುಂಬದ ಸದಸ್ಯರು ನಮ್ಮ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಸೆಯ್ಯದ್ ಆರೋಪಿಸಿದ್ದರು.
ʼಹರ್ಷ್ ಕೆಸ್ವಾನಿ ಕುಟುಂಬ ನನ್ನ ಮತ್ತು ಸಹೋದರನ ವಿರುದ್ಧ ಕೊಲೆ ಯತ್ನದ ಆರೋಪದಲ್ಲಿ ಪ್ರಕರಣ ದಾಖಲಿಸಿದೆ ಎಂಬ ಕಾರಣಕ್ಕೆ ಖಡಕ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಶಶಿಕಾಂತ್ ಚೌಹಾಣ್ ನಾವು ನೀಡಿದ ದೂರಿಗೆ ಸಂಬಂಧಿಸಿ ಎಫ್ಐಆರ್ ದಾಖಲಿಸಲು ನಿರಾಕರಿಸಿದ್ದಾರೆʼ ಎಂದು ಸೆಯ್ಯದ್ ಆರೋಪಿಸಿದ್ದಾರೆ.
ನ್ಯಾಯಮೂರ್ತಿಗಳಾದ ರವೀಂದ್ರ ಘುಗೆ ಮತ್ತು ಗೌತಮ್ ಅಂಕಡ್ ಅವರ ವಿಭಾಗೀಯ ಪೀಠವು ಹಿಂದಿನ ವಿಚಾರಣೆಯಲ್ಲಿ ಸ್ಪಷ್ಟ ಆದೇಶ ಹೊರಡಿಸಿದ್ದರೂ, ಸೈಯದ್ ಸಹೋದರರ ದೂರಿನ ಬಗ್ಗೆ ಎಫ್ಐಆರ್ ದಾಖಲಿಸುವುದಿಲ್ಲ ಎಂದು ಸ್ಟೇಷನ್ ಹೌಸ್ ಅಧಿಕಾರಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಇದರಿಂದ ಹೈಕೋರ್ಟ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದೆ.
ʼಆ ಅಧಿಕಾರಿ ಏಕೆ ಪಕ್ಷಪಾತೀಯವಾಗಿ ನಡೆದುಕೊಳ್ಳುತ್ತಿದ್ದಾರೆ? ಅವರು ಪಕ್ಷಪಾತೀಯವಾಗಿ ವರ್ತಿಸಬಾರದು. ಎದುರು ಪಾರ್ಟಿ ಎಫ್ಐಆರ್ ದಾಖಲಿಸಲು ಬರುವ ಪ್ರಕರಣಗಳಲ್ಲಿ ಅವರಿಗೆ ಕಾನೂನು ಕ್ರಮಗಳ ಬಗ್ಗೆ ತಿಳಿದಿಲ್ಲದಿದ್ದರೆ, ಅವರ ಹಿರಿಯ ಅಧಿಕಾರಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ. ದೂರು ಮತ್ತು ದಾಖಲೆಯಲ್ಲಿರುವ ಫೋಟೋಗಳನ್ನು ಮೇಲ್ನೋಟಕ್ಕೆ ನೋಡಿದರೂ ದೂರುದಾರರು ಮತ್ತು ಸಹೋದರರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಕಂಡುಬಂದಿದೆ. ದೂರಿನ ಆಧಾರದ ಮೇಲೆ 48 ಗಂಟೆಗಳ ಒಳಗೆ ಪ್ರಥಮ ಮಾಹಿತಿ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ ಎಂದು ಪೀಠವು ಹೇಳಿದೆ.
ಸ್ಟೇಷನ್ ಹೌಸ್ ಅಧಿಕಾರಿ ಶಶಿಕಾಂತ್ ಚೌಹಾಣ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ ವಿವರಣೆ ಕೇಳುವಂತೆ ನ್ಯಾಯಾಲಯ ಪುಣೆ ಪೊಲೀಸ್ ಆಯುಕ್ತರಿಗೆ ತಿಳಿಸಿದೆ. ಅಧಿಕಾರಿಯ ವಿವರಣೆ ತೃಪ್ತಿಕರವಾಗಿಲ್ಲದಿದ್ದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಪೀಠವು ಹೇಳಿದೆ.