ಕ್ರೀಡಾಪಟುಗೆ ಮಾನಸಿಕ ಕಿರುಕುಳ ಪ್ರಕರಣ: ರಾಜಕಾರಣಿ, ಆರ್‌ಟಿಐ ಕಾರ್ಯಕರ್ತ ಬಂಧನ
ದ್ಯುತಿ ಚಂದ್ (PTI)
ಭುವನೇಶ್ವರ: 2021ರಲ್ಲಿ ಸ್ಪ್ರಿಂಟರ್ ದ್ಯುತಿ ಚಂದ್ ದಾಖಲಿಸಿದ್ದ ಮಾನಸಿಕ ಕಿರುಕುಳ ಪ್ರಕರಣದಲ್ಲಿ ಆರ್‌ಟಿಐ ಕಾರ್ಯಕರ್ತ, ರಾಜಕಾರಣಿ ಪ್ರದೀಪ್ ಪ್ರಧಾನ್ ಅವರನ್ನು ರವಿವಾರ ಬಂಧಿಸಲಾಗಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ನೂತನ ರಾಜಕೀಯ ಪಕ್ಷವಾದ ‘ಮೊ ದಳ’ದ ಕಾರ್ಯದರ್ಶಿಯೂ ಆಗಿರುವ ಪ್ರಧಾನ್ ಅವರನ್ನು ಭುವನೇಶ್ವರ-ಕಟಕ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಎರಡು ವರ್ಷಗಳ ಹಿಂದೆ ನಡೆದಿದ್ದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕಾಗಿ ಪ್ರಧಾನ್ ಹಾಗೂ ಇನ್ನೂ ಕೆಲವು ವ್ಯಕ್ತಿಗಳು ನನಗೆ ಮಾನಸಿಕ ಕಿರುಕುಳ ನೀಡಿದ್ದರು ಎಂದು ದ್ಯುತಿ ದೂರನ್ನು ದಾಖಲಿಸಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದ ದ್ಯುತಿ, ಪ್ರಧಾನ್ ಹಾಗೂ ಇನ್ನಿತರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಒಡಿಶಾ ಹೈಕೋರ್ಟ್ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಒಡಿಶಾ ಹೈಕೋರ್ಟ್, ಪ್ರಧಾನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ದ್ಯುತೀ, “ಮೊದಲಿಗೆ ಪ್ರಧಾನ್ ನಾಪತ್ತೆಯಾಗಿದ್ದಾರೆ ಎಂದು ಅವರನ್ನು ಬಂಧಿಸಿರಲಿಲ್ಲ. ನಾನು ಈ ಕುರಿತು ಮೂರು ಬಾರಿ ಪೊಲೀಸ್ ಠಾಣೆಗೆ ಭೇಟಿ ನೀಡಿ, ನಂತರ ಅವರನ್ನು ಬಂಧಿಸಬೇಕು ಎಂದು ಹೈಕೋರ್ಟ್ ಮೊರೆ ಹೋಗಿದ್ದೆ. ಅಂತಿಮವಾಗಿ ಪೊಲೀಸರು ಪ್ರಧಾನ್ ನನ್ನು ಬಂಧಿಸಿದ್ದಾರೆ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಆದರೆ, ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿರುವ ಪ್ರಧಾನ್, ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಪ್ರತಿ ಆರೋಪ ಮಾಡಿದ್ದಾರೆ.
ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಾಗೂ ಮಾಜಿ ಅಧಿಕಾರಿಯಾದ ವಿ.ಕೆ.ಪಾಂಡಿಯನ್ ವಿರುದ್ಧ ಮೋ ದಳವು ಪ್ರಾಥಮಿಕ ಮಾಹಿತಿ ವರದಿಗಳನ್ನು ದಾಖಲಿಸಿರುವುದರಿಂದ ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ” ಎಂದು ಪ್ರಧಾನ್ ದೂರಿದ್ದಾರೆ.