ಸಣ್ಣ ಉಪಗ್ರಹ ಉಡಾವಣಾ ವಾಹನ ಖಾಸಗೀಕರಣ: ಅದಾನಿ ಗ್ರೂಪ್ ಸೇರಿದಂತೆ ಮೂರು ಸಂಸ್ಥೆಗಳು ಆಯ್ಕೆಯ ಅಂತಿಮ ಪಟ್ಟಿಯಲ್ಲಿ
ಗೌತಮ್ ಅದಾನಿ | PC : adani.com
ಬೆಂಗಳೂರು: ಭಾರತದ ಸಣ್ಣ ಉಪಗ್ರಹ ಉಡಾವಣಾ ವಾಹನ (ಎಸ್‌ಎಸ್‌ಎಲ್‌ವಿ)ದ ಉತ್ಪಾದನೆಯ ಖಾಸಗೀಕರಣಕ್ಕೆ ಸರಕಾರವು ಸಜ್ಜಾಗಿದ್ದು,ಅದಾನಿ ಗ್ರೂಪ್ ಇತರ ಎರಡು ಸರಕಾರಿ ಸ್ವಾಮ್ಯದ ಸಂಸ್ಥೆಗಳೊಂದಿಗೆ ಆಯ್ಕೆಯ ಅಂತಿಮ ಪಟ್ಟಿಯಲ್ಲಿದೆ ಎಂದು ಬಲ್ಲ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ.
ಇಸ್ರೋ ಅಭಿವೃದ್ಧಿಗೊಳಿಸಿರುವ ಎಸ್‌ಎಸ್‌ಎಲ್‌ವಿ ಕಡಿಮೆ ವೆಚ್ಚದ ಉಡಾವಣಾ ವಾಹನವಾಗಿದ್ದು,500 ಕೆ.ಜಿ.ವರೆಗೆ ತೂಕದ ಉಪಗ್ರಹಗಳನ್ನು ಭೂಮಿಯ ಕೆಳ ಕಕ್ಷೆ(ಎಲ್‌ಇಒ)ಗೆ ಸೇರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಉಪಗ್ರಹ ಉಡಾವಣಾ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚಿನ ಬೇಡಿಕೆಯ ವಿಭಾಗವಾಗಿದೆ.
2023ರಲ್ಲಿ ಈ ರಾಕೆಟ್‌ನ ಮೊದಲ ಯಶಸ್ವಿ ಉಡಾವಣೆಯ ಬಳಿಕ ಭಾರತದ ವಾಣಿಜ್ಯ ಬಾಹ್ಯಾಕಾಶ ಕ್ಷೇತ್ರದ ವಿಸ್ತರಣೆಗೆ ಒತ್ತು ನೀಡಲು ಅದರ ಉತ್ಪಾದನೆ ಮತ್ತು ತಂತ್ರಜ್ಞಾನವನ್ನು ಖಾಸಗಿ ಉದ್ಯಮಕ್ಕೆ ವರ್ಗಾಯಿಸಲು ಸರಕಾರವು ಮುಂದಾಗಿದೆ. ಈ ಕ್ರಮವು ಸ್ಪೇಸ್‌ಎಕ್ಸ್‌ನಂತಹ ಖಾಸಗಿ ಕಂಪನಿಗಳ ಪ್ರಾಬಲ್ಯವಿರುವ ಜಾಗತಿಕ ಉಪಗ್ರಹ ಉಡಾವಣೆ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲನ್ನು ತನ್ನದಾಗಿಸಿಕೊಳ್ಳಲು ಭಾರತಕ್ಕೆ ನೆರವಾಗುತ್ತದೆ ಎಂದು ಸರಕಾರವು ಆಶಿಸಿದೆ.
‘ಎಲ್‌ಇಒ ಎನ್ನುವುದು ಈಗ ಆಟದ ಹೆಸರಾಗಿದೆ,ಹೀಗಾಗಿ ಸಂಭಾವ್ಯ ವಿಜೇತರು ತ್ವರಿತವಾಗಿ ಬೆಳೆಯುತ್ತಿರುವ ಮಾರುಕಟ್ಟೆಯ ಲಾಭವನ್ನು ನಿಜವಾಗಿಯೂ ಪಡೆದುಕೊಳ್ಳುವ ಅವಕಾಶವನ್ನು ಹೊಂದಿದ್ದಾರೆ ಎಂದು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿರುವ ಡೆಲಾಯ್ಟ್‌ನ ನಿರ್ದೇಶಕ ದಾಮೋದರನ್ ರಾಮನ್ ಹೇಳಿದರು.
ಭಾರತೀಯ ಬಾಹ್ಯಾಕಾಶ ಉದ್ಯಮವನ್ನು ಖಾಸಗಿಯವರಿಗೆ ಮುಕ್ತಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ನೀತಿಯಡಿ ಇಂತಹ ಮೊದಲ ಉಪಕ್ರಮವಾಗಿರುವ ಎಸ್‌ಎಸ್‌ಎಲ್‌ವಿ ಖಾಸಗೀಕರಣಕ್ಕಾಗಿ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಆರಂಭದಲ್ಲಿ ಸುಮಾರು 20 ಕಂಪನಿಗಳು ಆಸಕ್ತಿ ವ್ಯಕ್ತಪಡಿಸಿದ್ದವು.
ಅದಾನಿ ಗ್ರೂಪ್‌ನ ಅದಾನಿ ಡಿಫೆನ್ಸ್ ಸಿಸ್ಟಮ್ಸ್ ಆ್ಯಂಡ್ ಟೆಕ್ನಾಲಜೀಸ್ ಪಾಲು ಬಂಡವಾಳ ಹೊಂದಿರುವ ಆಲ್ಫಾ ಡಿಸೈನ್ ಟೆಕ್ನಾಲಜೀಸ್,ಸರಕಾರಿ ಸ್ವಾಮ್ಯದ ಭಾರತ ಡೈನಾಮಿಕ್ಸ್ ಲಿ. ಮತ್ತು ಎಚ್‌ಎಎಲ್ ಈಗ ಅಂತಿಮ ಆಯ್ಕೆ ಪಟ್ಟಿಯಲ್ಲಿ ಉಳಿದುಕೊಂಡಿರುವ ಮೂರು ಕಂಪನಿಗಳಾಗಿವೆ.
ಬಿಡ್‌ನಲ್ಲಿ ವಿಜೇತ ಕಂಪನಿಯು ಎಸ್‌ಎಸ್‌ಎಲ್‌ವಿಗಾಗಿ ಇಸ್ರೋಕ್ಕೆ ಸುಮಾರು 300 ಕೋ.ರೂ.ಗಳನ್ನು ಪಾವತಿಸುವ ನಿರೀಕ್ಷೆಯಿದೆ.