ಅಫ್ಘಾನ್ ರಾಯಭಾರಿ ಕಚೇರಿಯ ಉಸ್ತುವಾರಿ ರಾಜತಾಂತ್ರಿಕರಾಗಿ ನೂರ್ ಅಹ್ಮದ್ ನೂರ್ ನೇಮಕ
ನೂರ್ ಅಹ್ಮದ್ ನೂರ್ | Photo Credit : Khaama Press
ಹೊಸದಿಲ್ಲಿ, ಜ.10: ಇಲ್ಲಿರುವ ಅಫ್ಘಾನ್ ರಾಯಭಾರಿ ಕಚೇರಿಯ ಉಸ್ತುವಾರಿ ರಾಜತಾಂತ್ರಿಕರಾಗಿ ನೂರ್ ಅಹ್ಮದ್ ನೂರ್ ಅವರನ್ನು ನೇಮಿಸಲಾಗಿದೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ.
ತಾಲಿಬಾನ್ ನ ಹಿರಿಯ ಸದಸ್ಯರಾದ ಮುಫ್ತಿ ನೂರ್ ಅಹ್ಮದ್ ನೂರ್ ಶನಿವಾರ ಹೊಸದಿಲ್ಲಿಗೆ ಆಗಮಿಸಿದ್ದು, ಅಫ್ಘಾನಿಸ್ತಾನದ ರಾಯಭಾರಿ ಕಚೇರಿಯ ಉಸ್ತುವಾರಿ ರಾಜತಾಂತ್ರಿಕರಾಗಿ ಪದಗ್ರಹಣ ಮಾಡಿದ್ದಾರೆಂದು ಅವು ತಿಳಿಸಿವೆ.
ನೂರ್ ಅಹ್ಮದ್ ಅವರು ಈ ಹಿಂದೆ ಅಫ್ಘಾನಿಸ್ತಾನದ ವಿದೇಶಾಂಗ ವ್ಯವಹಾರಗಳ ಆದ್ಯ ರಾಜಕೀಯ ವಿಭಾಗದ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಕಳೆದ ಕೆಲವು ತಿಂಗಳುಗಳಲ್ಲಿ, ಅದರಲ್ಲೂ ವಿಶೇಷವಾಗಿ ಅಫ್ಘಾನ್ ವಿದೇಶಾಂಗ ಸಚಿವ ಆಮೀರ್ ಖಾನ್ ಮುತ್ತಾಕಿ ಅವರು ಅಕ್ಟೋಬರ್‌ನಲ್ಲಿ ಭಾರತಕ್ಕೆ ಏಳು ದಿನಗಳ ಭೇಟಿ ನೀಡಿದ ನಂತರ ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯಗಳಲ್ಲಿ ಸ್ಥಿರವಾದ ಪ್ರಗತಿ ಉಂಟಾಗಿದೆ.
ಮುತ್ತಾಕಿ ಅವರ ಭಾರತ ಭೇಟಿ ಸಂದರ್ಭದಲ್ಲಿ ಅವರ ಜೊತೆಗೆ ಬಂದಿದ್ದ ಅಫ್ಘಾನ್ ನಿಯೋಗದಲ್ಲಿ ಮುಫ್ತಿ ನೂರ್ ಅಹ್ಮದ್ ನೂರ್ ಕೂಡ ಇದ್ದರು.
ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತಕ್ಕೆ ಭಾರತವು ಈತನಕ ಅಧಿಕೃತ ಮಾನ್ಯತೆಯನ್ನು ನೀಡಿಲ್ಲವಾದರೂ, ಆ ದೇಶಕ್ಕೆ ನೆರವು ಹಾಗೂ ವೈದ್ಯಕೀಯ ಸಾಮಗ್ರಿಗಳನ್ನು ಪೂರೈಕೆ ಮಾಡುವ ಪ್ರಮುಖ ದಾನಿ ದೇಶಗಳಲ್ಲೊಂದಾಗಿದೆ.
ಹೈದರಾಬಾದ್ ಹಾಗೂ ಮುಂಬೈನಲ್ಲಿರುವ ಅಫ್ಘಾನ್ ದೂತಾವಾಸ ಕಚೇರಿಗಳನ್ನು ಕೂಡ ತಾಲಿಬಾನ್ ನೇಮಕಗೊಳಿಸಿದ ರಾಜತಾಂತ್ರಿಕರೇ ನಿರ್ವಹಿಸುತ್ತಿದ್ದಾರೆ.