Maharashtra | ಫಡ್ನವೀಸ್, ಶಿಂದೆಯನ್ನು ಸುಳ್ಳು ಕೇಸ್ ನಲ್ಲಿ ಸಿಲುಕಿಸಲು ಪಿತೂರಿ: SIT ವರದಿ
ದೇವೇಂದ್ರ ಫಡ್ನವೀಸ್ , ಏಕನಾಥ ಶಿಂದೆ | Photo Credit : PTI
ಮುಂಬೈ, ಜ. 10: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಉಪಮುಖ್ಯಮಂತ್ರಿ ಏಕನಾಥ ಶಿಂದೆಯನ್ನು ಪ್ರಕರಣವೊಂದರಲ್ಲಿ ‘ಸಿಲುಕಿಸಲು’ ನಡೆಸಿರುವ ‘ಗಂಭೀರ ಪಿತೂರಿ’ಯೊಂದು ಹೊರಬಿದ್ದಿದೆ ಎಂದು ವಿಶೇಷ ತನಿಖಾ ತಂಡ (SIT) ವರದಿ ಹೇಳಿದೆ.
2016ರಲ್ಲಿ ಥಾಣೆ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದ ವಿಷಯ ಇದಾಗಿದೆ.
ಸುಳ್ಳು ಪ್ರಕರಣವೊಂದರಲ್ಲಿ ನಾಯಕರನ್ನು ಸಿಲುಕಿಸಲು ಸಂಚು ರೂಪಿಸಿರುವ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್ ಮಾಜಿ ಮಹಾನಿರ್ದೇಶಕ ಸಂಜಯ್ ಪಾಂಡೆ, ಮಾಜಿ ಉಪ ಕಮಿಶನರ್ ಲಕ್ಷ್ಮಿಕಾಂತ್ ಪಾಟೀಲ್ ಹಾಗೂ ಸಹಾಯಕ ಕಮಿಶನರ್ ಸರ್ದಾರ್ ಪಾಟೀಲ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು SIT ಶಿಫಾರಸು ಮಾಡಿದೆ.
ಈ ವರದಿಯನ್ನು ಪೊಲೀಸ್ ಮಾಜಿ ಮಹಾನಿರ್ದೇಶಕಿ ರಶ್ಮಿ ಶುಕ್ಲಾ ತಮ್ಮ ನಿವೃತ್ತಿಗೆ ಐದು ದಿನಗಳು ಬಾಕಿ ಇರುವಾಗ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದರು.
ಮಹಾ ವಿಕಾಸ್ ಅಘಾಡಿ ಸರ್ಕಾರದ ಆಡಳಿತ ಅವಧಿಯಲ್ಲಿ ದೇವೇಂದ್ರ ಫಡ್ನವೀಸ್ ಅವರನ್ನು ಸುಳ್ಳು ಮೊಕದ್ದಮೆಯಲ್ಲಿ ಸಿಲುಕಿಸುವ ಪ್ರಯತ್ನಗಳು ಹೆಚ್ಚಾಗಿದ್ದವು. ಸಂಜಯ್ ಪಾಂಡೆ ಮುಂಬೈ ಪೊಲೀಸ್ ಕಮಿಶನರ್ ಆಗಿ ಹಾಗೂ ಬಳಿಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕವಾದ ನಂತರ ಈ ಪ್ರಯತ್ನಗಳು ಇನ್ನಷ್ಟು ತೀವ್ರಗೊಂಡವು ಎಂದು ವರದಿ ಹೇಳಿದೆ.