Meghalaya | ಯುವಕನ ಹತ್ಯೆ; ಮೂವರ ಬಂಧನ: ಕೋಮು ಸಾಮರಸ್ಯಕ್ಕೆ ಸಿಎಂ ಕರೆ
ಸಾಂದರ್ಭಿಕ ಚಿತ್ರ
ಗುವಾಹಟಿ, ಜ.10: ಬಾಂಗ್ಲಾದೇಶ ಗಡಿಗೆ ಹೊಂದಿಕೊಂಡಿರುವ ಮೇಘಾಲಯದ ಪಶ್ಚಿಮ ಗ್ಯಾರೋ ಹಿಲ್ಸ್ ಜಿಲ್ಲೆಯಲ್ಲಿ ಶುಕ್ರವಾರ ದುಷ್ಕರ್ಮಿಗಳು ನಡೆಸಿದ ದಾಳಿಯಲ್ಲಿ ಓರ್ವ ಯುವಕ ಮೃತಪಟ್ಟಿದ್ದು, ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಅವರು ಶಾಂತಿ ಮತ್ತು ಕೋಮು ಸಾಮರಸ್ಯವನ್ನು ಕಾಪಾಡುವಂತೆ ಶನಿವಾರ ಜನರಿಗೆ ಮನವಿ ಮಾಡಿದ್ದಾರೆ.
ಮೃತ ದಿಲ್ಸೆಂಗ್ ಎಂ. ಸಂಗ್ಮಾ ಗ್ಯಾರೋ ಹಿಲ್ಸ್‌ನ ‘ಅಚಿಕ್’ ಎಂಬ ಎನ್‌ಜಿಒದ ಸದಸ್ಯರಾಗಿದ್ದರು.
ಜಿಲ್ಲೆಯ ರಾಜಬಾಲಾ ಗ್ರಾಮದ ಸಮೀಪ ನಡೆದ ಈ ಘಟನೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯನ್ನು ಖಂಡಿಸಿದ ಮುಖ್ಯಮಂತ್ರಿ ಸಂಗ್ಮಾ, ವಿವಿಧ ಸ್ಥಳಗಳಲ್ಲಿ ನಡೆದ ದಾಳಿಗಳ ಬಳಿಕ ಮೂವರನ್ನು ಬಂಧಿಸಲಾಗಿದ್ದು, ಘಟನೆಯಲ್ಲಿ ಭಾಗಿಯಾಗಿರುವ ಇತರರನ್ನು ಪತ್ತೆ ಹಚ್ಚಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದರು.
ಶಾಂತಿ ಮತ್ತು ಕೋಮು ಸಾಮರಸ್ಯ ಕಾಪಾಡುವಂತೆ ಕರೆ ನೀಡಿದ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುವಂತೆ ಮನವಿ ಮಾಡಿದರು. ಈ ಘೋರ ಅಪರಾಧದಲ್ಲಿ ಭಾಗಿಯಾಗಿರುವ ಎಲ್ಲರನ್ನು ನ್ಯಾಯದ ಕಟಕಟೆಗೆ ತರಲಾಗುವುದು ಎಂದು ಅವರು ಭರವಸೆ ನೀಡಿದರು.
ಶುಕ್ರವಾರ ಮಧ್ಯಾಹ್ನ ಅಕ್ರಮ ಕಲ್ಲು ಕೋರೆಯೊಂದರ ತಪಾಸಣೆಗಾಗಿ ಯುವಕರ ಗುಂಪೊಂದು ರಾಜಬಾಲಾ ಸಮೀಪ ತೆರಳಿತ್ತು. ವಾಪಸ್ ಬರುತ್ತಿದ್ದ ವೇಳೆ ಮತ್ತೊಂದು ಗುಂಪು ಅವರ ವಾಹನಗಳನ್ನು ತಡೆದಿದೆ. ವಾಗ್ವಾದ ಶೀಘ್ರವೇ ದಾಳಿಗೆ ತಿರುಗಿದ್ದು, ಮೊದಲ ಗುಂಪಿನ ಹೆಚ್ಚಿನವರು ಅಲ್ಲಿಂದ ಪರಾರಿಯಾಗಲು ಯಶಸ್ವಿಯಾದರು. ಇಬ್ಬರು ತೀವ್ರವಾಗಿ ಗಾಯಗೊಂಡು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೆ ಒಬ್ಬರು ಮೃತಪಟ್ಟಿದ್ದಾರೆ. ದಾಳಿಯನ್ನು ಯಾರು ನಡೆಸಿದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ದಿಲ್ಸೆಂಗ್ ಅವರ ‘ಘೋರ ಮತ್ತು ಕ್ರೂರ’ ಹತ್ಯೆಯನ್ನು ಖಂಡಿಸಿರುವ ಗ್ಯಾರೋ ಸ್ಟುಡೆಂಟ್ಸ್ ಯೂನಿಯನ್, ಘಟನೆಯಲ್ಲಿ ಭಾಗಿಯಾಗಿರುವ ಎಲ್ಲರನ್ನು ತಕ್ಷಣ ಗುರುತಿಸಿ ಬಂಧಿಸುವಂತೆ ಆಗ್ರಹಿಸಿದೆ. ಸ್ಥಳೀಯ ಶಾಸಕ ಡಾ. ಮಿಝನೂರ್ ರಹ್ಮಾನ್ ಕಾಜಿಯವರೂ ಹತ್ಯೆಯನ್ನು ಖಂಡಿಸಿದ್ದಾರೆ.