×
Ad

ಸಹ-ವಾಸಿ ಸಂಗಾತಿಯನ್ನು ಪಿಂಚಣಿಗೆ ಪರಿಗಣಿಸಿ: ಕೇಂದ್ರ ಸರಕಾರಕ್ಕೆ DELHI ಹೈಕೋರ್ಟ್ ನಿರ್ದೇಶನ

Update: 2026-01-10 21:00 IST

ದಿಲ್ಲಿ ಹೈಕೋರ್ಟ್ | Photo Credit : PTI 

ಹೊಸದಿಲ್ಲಿ, ಜ. 10: ಕುಟುಂಬ ಪಿಂಚಣಿ ಮತ್ತು ಆರೋಗ್ಯ ರಕ್ಷಣೆ ಸೌಲಭ್ಯಗಳಿಗಾಗಿ ಪಿಂಚಣಿ ಪಾವತಿ ಆದೇಶದಲ್ಲಿ ತನ್ನ 40 ವರ್ಷಗಳಿಗೂ ಅಧಿಕ ಅವಧಿಯ ಸಹ-ವಾಸಿ ಸಂಗಾತಿ ಹಾಗೂ ತಮ್ಮ ಮಕ್ಕಳನ್ನು ಸೇರ್ಪಡೆಗೊಳಿಸುವಂತೆ ಕೋರಿ ನಿವೃತ್ತ ಸರಕಾರಿ ಉದ್ಯೋಗಿಯೊಬ್ಬರು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸುವಂತೆ ದಿಲ್ಲಿ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ.

ಅರ್ಜಿದಾರ ಸರಕಾರಿ ಉದ್ಯೋಗಿಯು ತನ್ನ ಸಂಬಂಧವನ್ನು ಯಾವತ್ತೂ ಮುಚ್ಚಿಡಲಿಲ್ಲ ಎಂದು ನ್ಯಾಯಮೂರ್ತಿಗಳಾದ ನವೀನ್ ಚಾವ್ಲ ಮತ್ತು ಮಧು ಜೈನ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ. ತನ್ನ ಸಂಗಾತಿ ಮತ್ತು ಮಕ್ಕಳನ್ನು ತನ್ನ ಕುಟುಂಬವಾಗಿ ಪರಿಗಣಿಸಬೇಕೆನ್ನುವ ಮನವಿಯನ್ನು ‘‘ತೀವ್ರ ದುರ್ನಡತೆ’’ ಎಂದು ಪರಿಗಣಿಸಿ ನಿವೃತ್ತಿ ನಂತರದ ಸವಲತ್ತುಗಳನ್ನು ನಿರಾಕರಿಸುವುದು ತಪ್ಪು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಇದರೊಂದಿಗೆ, ಮಾಸಿಕ ಪಿಂಚಣಿ ಮತ್ತು ಗ್ರಾಚ್ಯುಯಿಟಿಯ 50 ಶೇಕಡ ಭಾಗವನ್ನು ತಡೆಹಿಡಿಯುವ ಅಧಿಕಾರಿಗಳ ನಿರ್ಧಾರವನ್ನು ಎತ್ತಿಹಿಡಿದ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಯ 2018ರ ಆದೇಶವನ್ನು ನ್ಯಾಯಾಲಯ ರದ್ದುಗೊಳಿಸಿದೆ.

‘‘ಅರ್ಜಿದಾರರ ತಿಂಗಳ ಪಿಂಚಣಿ ಮತ್ತು ಗ್ರಾಚ್ಯುಯಿಟಿಯ 50 ಶೇಕಡವನ್ನು ಶಾಶ್ವತವಾಗಿ ತಡೆಹಿಡಿಯುವ ಅಥವಾ ಅರ್ಜಿದಾರರ ಆಶ್ರಿತರಿಗೆ ಕುಟುಂಬ ಪಿಂಚಣಿಯನ್ನು ನಿರಾಕರಿಸುವ ಪ್ರತಿವಾದಿಗಳ (ಸರಕಾರ) ನಿರ್ಧಾರದಲ್ಲಿ ನಮಗೆ ಸಕಾರಣ ಕಾಣುವುದಿಲ್ಲ’’ ಎಂದು ಇತ್ತೀಚೆಗೆ ನೀಡಿದ ತೀರ್ಪಿನಲ್ಲಿ ನ್ಯಾಯಾಲಯ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News