×
Ad

Uttar Pradesh | ಬಾಲಕನನ್ನು ನರಬಲಿಕೊಟ್ಟ ಸೋದರ ಸಂಬಂಧಿಗೆ ಮರಣದಂಡನೆ

Update: 2026-01-10 22:10 IST

 ಸಾಂದರ್ಭಿಕ ಚಿತ್ರ

ಲಕ್ನೋ, ಜ.10: 10 ವರ್ಷದ ಬಾಲಕನನ್ನು ನರಬಲಿಕೊಟ್ಟ ಪ್ರಕರಣದ ದೋಷಿಗೆ ಬಹರಾಯಿಚ್‌ನ ಸ್ಥಳೀಯ ನ್ಯಾಯಾಲಯವು ಮರಣದಂಡನೆ ವಿಧಿಸಿ ತೀರ್ಪು ನೀಡಿದೆ. ಅಲ್ಲದೆ ಆತನಿಗೆ 1 ಲಕ್ಷ ರೂ. ದಂಡವನ್ನೂ ವಿಧಿಸಲಾಗಿದೆ.

ತಾಂತ್ರಿಕ ಸೇರಿದಂತೆ ಪ್ರಕರಣದ ಇನ್ನಿಬ್ಬರು ಆರೋಪಿಗಳನ್ನು ಪುರಾವೆಗಳ ಕೊರತೆಯ ಹಿನ್ನೆಲೆಯಲ್ಲಿ ದೋಷಮುಕ್ತಗೊಳಿಸಲಾಗಿದೆ. ಹೆಚ್ಚುವರಿ ಜಿಲ್ಲಾ ಹಾಗೂ ಸೆಶನ್ಸ್ ನ್ಯಾಯಾಧೀಶ ಸುನೀಲ್ ಪ್ರಸಾದ್ ಅವರು ಆರೋಪಿ ಅನೂಪ್ ಕುಮಾರ್ ವರ್ಮಾಗೆ ಗಲ್ಲು ಶಿಕ್ಷೆಯನ್ನು ಘೋಷಿಸಿದರು.

ನರಬಲಿ ನೀಡಿದಲ್ಲಿ ರೋಗಪೀಡಿತ ಪುತ್ರನು ಗುಣಮುಖನಾಗುವನೆಂದು ನಂಬಿದ ಅನೂಪ್ ಕುಮಾರ್, 10 ವರ್ಷದ ತನ್ನ ಸೋದರ ಸಂಬಂಧಿಯನ್ನು ಮೂಢನಂಬಿಕೆಯ ಆಚರಣೆಯೊಂದರಲ್ಲಿ ನರಬಲಿಕೊಟ್ಟಿದ್ದನು. ಬಂಧನದ ಬಳಿಕ ಆತ ತಪ್ಪೊಪ್ಪಿಕೊಂಡಿದ್ದನು. ಬಹರಾಯಿಚ್ ಜಿಲ್ಲೆಯ ನಾನಪಾರಾ ಕೋಟ್ವಾಲಿ ಪ್ರದೇಶದಲ್ಲಿ ಈ ಕೃತ್ಯ ನಡೆದಿತ್ತು.

ಅಪರಾಧದ ಬರ್ಬರತೆ ಹಾಗೂ ಗಂಭೀರತೆಯನ್ನು ಪರಿಗಣನೆಗೆ ತೆಗೆದುಕೊಂಡು ಆರೋಪಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಬೇಕೆಂದು ಪ್ರಾಸಿಕ್ಯೂಶನ್ ಪರ ವಕೀಲ ಸುನೀಲ್ ಕುಮಾರ್ ಜೈಸ್ವಾಲ್ ನ್ಯಾಯಾಲಯವನ್ನು ಆಗ್ರಹಿಸಿದ್ದರು.

2023ರ ಮಾರ್ಚ್ 23ರಂದು ಉತ್ತರಪ್ರದೇಶದ ಬಹರಾಯಿಚ್ ಜಿಲ್ಲೆಯ ಆಗೈಯಾ ಗ್ರಾಮದಲ್ಲಿ ರಾಮ್ ಕಿಶನ್ ಅವರ 10 ವರ್ಷದ ಪುತ್ರ ವಿವೇಕ್ ವರ್ಮಾನ ವಿರೂಪಗೊಂಡ ಮೃತದೇಹ ಪತ್ತೆಯಾಗಿತ್ತು. ಘಟನೆ ನಡೆದ ಸಮಯದಲ್ಲಿ ವಿವೇಕ್‌ನ ತಂದೆ ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದರು. ತನ್ನ ಪುತ್ರನ ಹತ್ಯೆಯ ಮಾಹಿತಿ ದೊರೆತ ಬಳಿಕ ಅವರು ಗ್ರಾಮಕ್ಕೆ ವಾಪಸಾಗಿದ್ದರು.

ರಾಮ್ ಕಿಶನ್ ಅವರ ದೂರಿನ ಆಧಾರದಲ್ಲಿ ಪೊಲೀಸರು ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಕೊಲೆ ಹಾಗೂ ಕ್ರಿಮಿನಲ್ ಸಂಚಿನ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ವಿವೇಕ್‌ನ ಸೋದರ ಸಂಬಂಧಿ ಅನೂಪ್ ಕುಮಾರ್ ಹಾಗೂ ತಾಂತ್ರಿಕ ಜಾಂಗ್ಲಿಯನ್ನು ಬಂಧಿಸಿದ್ದರು.

ತನ್ನ ಪುತ್ರ ಸತ್ಯಂ ಆಗಾಗ ಅಸ್ವಸ್ಥನಾಗುತ್ತಿದ್ದನು. ತನ್ನದೇ ಕುಟುಂಬದ ಮಗುವೊಂದನ್ನು ನರಬಲಿಕೊಟ್ಟಲ್ಲಿ ಪುತ್ರ ಗುಣಮುಖನಾಗುವನೆಂದು ತಾಂತ್ರಿಕನೊಬ್ಬ ಸಲಹೆ ನೀಡಿದ್ದನು. ಅದನ್ನು ನಂಬಿ ಈ ಕೃತ್ಯ ಎಸಗಿದ್ದಾಗಿ ಅನೂಪ್ ವಿಚಾರಣೆಯ ವೇಳೆ ತಿಳಿಸಿದ್ದನು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News